

ಕೊಪ್ಪಳ: ರೈತರು ಭತ್ತದ ಬದಲು ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ತಾಲೂಕಿನ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರ ಆರ್ಥಿಕದಾಯಕತೆ ಹೆಚ್ಚಿಸಲು ಅನುಸರಿಸಬೇಕಾದ ಬೆಳೆ ವೈವಿಧ್ಯತೆ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೈತರು ಒಂದೇ ಬೆಳೆ ಬೆಳೆಯುವ ಬದಲು, ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಭೂಮಿ ಫಲವತ್ತತೆ ಕಾಪಾಡಿಕೊಳ್ಳುವುದು ಮುಖ್ಯ. ಫಲವತ್ತತೆ ಕಾಪಾಡಿಕೊಂಡಲ್ಲಿ ಉತ್ತಮ ಇಳುವರಿ, ಆದಾಯ ಗಳಿಸಬಹುದು. ಭತ್ತದ ಬದಲು ತೋಟಗಾರಿಕೆ ಬೆಳೆಗಳು, ತಾಳೆ, ಕೋಕೋ, ಬಿದಿರು ಮುಂತಾದ ವಾಣಿಜ್ಯ ಬೆಳೆ ಬೆಳೆಯಲು ಅವಕಾಶವಿದೆ. ಸರ್ಕಾರದಿಂದಲೂ ಅದಕ್ಕೆ ಪ್ರೋತ್ಸಾಹ, ಸಹಾಯಧನ ಆಧಾರಿತ ಯೊಜನೆಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಬೆಳೆ ಬೆಳೆಯಬೇಕು. ಅನ್ನದಾತ ಆರ್ಥಿಕವಾಗಿ ಸಲಬವಾದರೆ, ದೇಶದ ಅಭಿವೃದ್ಧಿಯಾಗುತ್ತದೆ ಎಂದರು.
ಶಾಸಕರಾದ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಎಂಎಲ್ಸಿ ಮನೋಹರ ಮಸ್ಕಿ, ಮುಖಂಡ ಅಮರೇಗೌಡ ವಿರುಪಾಪುರ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿದ್ದರು.