ನಿತ್ಯೋತ್ಸವವಾಗಬೇಕು ಕನ್ನಡ; ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಮತ

01112020 Koppal BC Patil
Published on

ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಪಣೆ

ಕೊಪ್ಪಳ: ಕನ್ನಡ ಕೇವಲ ನವೆಂಬರ್ ಉತ್ಸವವಾಗದೇ ನಿತ್ಯೋತ್ಸವವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.

65ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು. ಇಂದು ಭಾಷಾ ಸ್ವಾಭಿಮಾನದ ಕೊರತೆಯಿಂದಾಗಿ ಕನ್ನಡ ನಶಿಸುವ ಸಾಧ್ಯತೆ ಎದುರಾಗಿದೆ. ಹೀಗಾಗಿ ನವೆಂಬರ್‌ನಲ್ಲಿ ಮಾತ್ರ ಕನ್ನಡ ಭಾಷೆ ಬಗ್ಗೆ ಜಾಗೃತರಾಗದೆ ವರ್ಷ ಪೂರ್ತಿಯೂ ನಮ್ಮ ಭಾಷೆ ಎಂಬ ಅಭಿಮಾನವಿರಬೇಕು. ಕನ್ನಡ ನಿತ್ಯೋತ್ಸವವಾಗಬೇಕು. ಕರ್ನಾಟಕ ಎನ್ನುವುದು ಅಖಂಡ. ನಮ್ಮದು ಅಖಂಡ ಕರ್ನಾಟಕ. ಕೊಪ್ಪಳ ಐತಿಹಾಸಿಕ ಹಿರಿಮೆ ಹೊಂದಿದ ನಾಡು, ತಿರುಳನ್ನಡ ನಾಡೆಂದ ಪ್ರಸಿದ್ಧಿಯಾಗಿದೆ. ಕೊಪ್ಪಳವು ಕರ್ನಾಟಕದ ಪ್ರಮುಖ ರಾಜಮನೆತನಗಳ ಆಳ್ವಿಕೆಗೊಳಪಟ್ಟ, ರಾಜಕೀಯ, ಧಾರ್ಮಿಕ, ಸಾಮರಸ್ಯಕ್ಕೆ ಹೆಸರಾದ ಬೀಡು. ಪರಧರ್ಮ ಸಹಿಷ್ಣುತೆಗೆ ಒಂದು ಮಾದರಿಯಾಗಿದೆ . ಈ ನಾಡನ್ನು ಸಾಂಸ್ಕೃತಿಕವಾಗಿ ಮತ್ತಷ್ಟು ಉನ್ನತ ಶಿಖರಕ್ಕೆ ತಲುಪಿಸಬೇಕಾದದ್ದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕಲಾ ಕ್ಷೇತ್ರಕ್ಕೂ ಕೊಪ್ಪಳ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ. ವೃತ್ತಿ ರಂಗಭೂಮಿ ಮಂಡಳಿಗಳು, ಪೌರಾಣಿಕ, ಸಾಮಾಜಿಕ, ಹವ್ಯಾಸಿ ನಾಟಕಗಳು, ಜಾನಪದ ಕಲೆಗಳು, ಬಯಲಾಟ, ಚಿತ್ರಕಲೆ, ಸಂಗೀತ - ಸಾಹಿತ್ಯ ಕ್ಷೇತ್ರಗಳಿಗೂ ಸಹ ಕೊಪ್ಪಳ ಜಿಲ್ಲೆ ಪ್ರಸಿದ್ಧಿಯಾಗಿದೆ. ರಾಜ್ಯೋತ್ಸವ ಸುಸಂದರ್ಭದಲ್ಲಿ ಜಾನಪದ ತೊಗಲು ಗೊಂಬೆ ಆಟದಲ್ಲಿ ಕೊಪ್ಪಳ ಜಿಲ್ಲೆಯ ಕೇಶಪ್ಪ ಶಿಳ್ಳೆಕ್ಯಾತ ಇವರಿಗೆ 2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಜಿಲ್ಲೆಯ ಹೆಮ್ಮೆಯಾಗಿದೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಉಪಾಧ್ಯಕ್ಷ ಬೀನಾಗೌಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಡಿಸಿ ಎಸ್. ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸ್ಪಿ ಟಿ.ಶ್ರೀಧರ್ ಇತರರಿದ್ದರು.

ಗಂಗಾವತಿಯಲ್ಲಿ ಕೃಷಿ ಕಾಲೇಜು ಆರಂಭಿಸಲು ಸಿಎಂ ಬಿಎಸ್‌ವೈ ಅನುಮತಿ ನೀಡಿದ್ದಾರೆ. ಈ ಸಂಬಂಧ ರಾಯಚೂರು ಕೃಷಿ ವಿವಿಯಿಂದ ವರದಿ ಸಲ್ಲಿಕೆಯಾಗಿದೆ. ಅದನ್ನು ಮತ್ತೊಮ್ಮೆ ಸಿಎಂ ಗಮನಕ್ಕೆ ತಂದು ಕಾಲೇಜು ಆರಂಭಕ್ಕೆ ಕ್ರಮ ಕೈಗೊಳ್ಳುವುದು. | ಬಿ.ಸಿ.ಪಾಟೀಲ್. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net