

ಕೊಪ್ಪಳ: ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳ ತಿದ್ದುಪಡಿ ರದ್ಧತಿಗೆ ಆಗ್ರಹಿಸಿ ಮಾ.22ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ತಿಳಿಸಿದರು.
ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ರೈತರಿಂದ ಕಸಿದುಕೊಳ್ಳುವ ಸಂಚಿನೊಂದಿಗೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ. ಎಂ.ಎಸ್.ಸ್ವಾಮಿನಾಥನ್ ವರದಿಯಲ್ಲಿ ಎಪಿಎಂಸಿಗಳನ್ನು ಬಲಪಡಿಸಬೇಕೆಂದು ತಿಳಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರ ಬದಲಿಗೆ ದಲ್ಲಾಳಿಗಳಿಗೆ ಲಾಭವಾಗಲಿದೆ. ದೇಶದಲ್ಲಿ ಸದ್ಯ ಐದು ಸಾವಿರ ಎಪಿಎಂಸಿಗಳಿದ್ದು, 45 ಸಾವಿರಕ್ಕೆ ಹೆಚ್ಚಿಸಬೇಕಿದೆ. ಆದರೆ, ಈಗಿರುವ ಎಪಿಎಂಸಿಗಳನ್ನೇ ಮುಚ್ಚಲಾಗುತ್ತಿದೆ. ಈ ಮೂಲಕ ರೈತರನ್ನು ಬೀದಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್ ತಿದ್ದುಪಡಿ ಕಾಯ್ದೆಯಲ್ಲೂ ಕೃಷಿಗೆ ರಿಯಾಯತಿ ದರದಲ್ಲಿ ವಿದ್ಯುತ್ ಪೂರೈಸುವ ಅಂಶಗಳಿಲ್ಲ. ಸ್ಮಾರ್ಟ್ ಮೀಟರ್ ಅಳವಡಿಸಲಿದ್ದು, ಕರೆನ್ಸಿ ಖಾಲಿಯಾದ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಗೋ ಹತ್ಯೆ ನಿಷೇಧ ಕಾಯ್ದೆಯಿಂದಲೂ ಅನ್ನದಾತರಿಗೆ ಲಾಭವಾಗಿಲ್ಲ. ಮಾ.22ರ ವಿಧಾನಸೌಧ ಚಲೋ ಚಳವಳಿಗೆ ಕೊಪ್ಪಳದಿಂದ ಸಾವಿರಾರು ರೈತರು ಬರಲಿದ್ದಾರೆ ಎಂದು ವೀರಸಂಗಯ್ಯ ತಿಳಿಸಿದರು. ಹೋರಾಟಗಾರರಾದ ವಿಠ್ಠಪ್ಪ ಗೋರಂಟ್ಲಿ, ಡಿ.ಎಚ್.ಪೂಜಾರ, ಅಮ್ಜದ್ ಪಾಷಾ ಇತರರಿದ್ದರು.