

ಕೊಪ್ಪಳ: ವಿಧಾನ ಮಂಡಲದ ಎಸ್ಸಿ, ಎಸ್ಟಿ ಕಲ್ಯಾಣ ಸಮಿತಿ ಜಿಲ್ಲೆಗೆ ಆಗಮಿಸಿದಾಗ ಅಗತ್ಯ ಮಾಹಿತಿ ಒದಗಿಸಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದ 19 ಜನ ಸದಸ್ಯರ ತಂಡ ಸೆ.19ರಿಂದ 21ವರೆಗೆ ಕಲಬುರ್ಗಿ ವಿಭಾಗದಲ್ಲಿ ಪ್ರವಾಸ ಹಮ್ಮಿಕೊಂಡಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ಸೆ.20ರಂದು ಬೆಳಗ್ಗೆ 10.30 ಗಂಟೆಗೆ ರಾಯಚೂರಿನಲ್ಲಿ ಜರುಗಲಿದೆ. ಎಲ್ಲ ಅನುಷ್ಠಾನ ಇಲಾಖೆಗಳಲ್ಲಿ ಕಳೆದ 3 ವರ್ಷಗಳಲ್ಲಿ ಸಾಮಾನ್ಯ, ಎಸ್ಸಿಪಿ&ಟಿಎಸ್ಪಿ ಕಾರ್ಯಕ್ರಮಗಳ ಪ್ರಗತಿ ವರದಿ ಸಲ್ಲಿಸಿ. ಮಂಜೂರಾದ, ಬಿಡುಗಡೆಯಾದ, ರ್ಖಚಾದ ಮತ್ತು ಉಳಿಕೆಯಾದ ಅನುದಾನದ ವಿವರಗಳನ್ನು ಮತ್ತು ಹಮ್ಮಿಕೊಂಡ ಕಾರ್ಯಕ್ರಮಗಳ ವಿವರಗಳನ್ನು ಯೋಜನಾವಾರು ತಯಾರಿಸಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಲು ನಿರ್ದೇಶಿಸಿದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಡಿಡಿಪಿಐ ಶ್ರೀಶೈಲ ಬಿರಾದಾರ, ಡಿಡಿಪಿಯು ಜಗದೀಶ್ ಜಿ.ಎಚ್. ಇತರರಿದ್ದರು.