

ಗಿಣಿಗೇರಿ ಕೆರೆ ಅಭಿವೃದ್ಧಿಗೆ ಚಾಲನೆ | ಸ್ವಾರ್ಥಕ್ಕಾಗಿ ದೇವರಲ್ಲಿ ಬೇಡಿಕೆ ಸಲ್ಲಿಸಬೇಡಿ
ಕೊಪ್ಪಳ: ನೀರಿದ್ದರೆ ಮಾತ್ರ ನಾಗರಿಕತೆ, ಇತಿಹಾಸ ಬೆಳೆಯಲು ಸಾಧ್ಯ. ಪ್ರಕೃತಿ ನಮಗೆಲ್ಲ ಏನೆಲ್ಲ ನೀಡಿದೆ. ನಾವು ಪ್ರತಿಯಾಗಿ ನಿಸರ್ಗಕ್ಕೆ ಏನು ನೀಡಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕೆಂದು ಅಭಿನವ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಗಿಣಿಗೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆರೆ ಅಭಿವೃದ್ಧಿ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಋಷಿಯೊಬ್ಬ ದೇವರಲ್ಲಿ ಕಾಲಕಾಲಕ್ಕೆ ಮಳೆಯಾಗಲಿ, ಕೆರೆ ಕಟ್ಟೆಗಳು ತುಂಬಲಿ, ಭೂಮಿ ಹಸಿರಿನಿಂದ ಕಂಗೊಳಿಸಲಿ, ನನ್ನೂರಿನ ಜನ ಸಂತೋಷದಿಂದ ಇರಲಿ ಎಂದು ಬೇಡಿಕೊಳ್ಳುತ್ತಾನೆ. ಈ ರೀತಿ ಭಾವನೆ ಎಲ್ಲರಲ್ಲಿ ಬರಬೇಕು. ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ದೇವರಲ್ಲಿ ಬೇಡಿಕೊಳ್ಳುತ್ತೇವೆ. ಹೀಗಾಗಿ ನಾವೂ ಭಿಕ್ಷುಕರು. ಸ್ವಾರ್ಥಕ್ಕಾಗಿ ದೇವರಲ್ಲಿ ಬೇಡಿಕೆ ಸಲ್ಲಿಸಬೇಡಿ. ನಿಸರ್ಗ ನಮಗೆ ಎಲ್ಲವನ್ನು ನೀಡಿದೆ. ಅದಕ್ಕೆ ನಾವೇನಾದರೂ ನೀಡುವ ಶಕ್ತಿ ನೀಡು ಎಂದು ದೇವರನ್ನು ಬೇಡಬೇಕು. ಸೃಷ್ಟಿಯಲ್ಲಿ ಮೋಸವಿಲ್ಲ. ಪಂಚ ಭೂತಗಳಿಂದ ಜಗತ್ತು ನಿರ್ಮಾಣವಾಗಿದೆ. ಇದರಲ್ಲಿ ಯಾವುದಾದರೊಂದು ಕೆಟ್ಟರೆ, ನಮ್ಮ ಜೀವನ ಕೆಡುತ್ತದೆ. ಹೀಗಾಗಿ ನಮ್ಮ ಪ್ರಕೃತಿ ರಕ್ಷಿಸಬೇಕು. ನೀರಿನಿಂದ ಮಾತ್ರ ನಾಗರಿಕತೆ, ಇತಿಹಾಸ ಬೆಳೆಯಲಿದೆೆ. ಐವತ್ತು ಸಾವಿರ ಜನರಿಗೆ ಗಿಣಿಗೆರಿ ಕೆರೆ ನೀರು ನೀಡಿದೆ. ಅದಕ್ಕೆ ನಾವೇನು ಮಾಡಿದ್ದೇವೆ? ಹಾಳಾಗಿದ್ದಕ್ಕೆ ನಾವೆಲ್ಲ ಜವಾಬ್ದಾರರು. ಇದನ್ನು ಸ್ವಚ್ಛ ಮಾಡಿದರೆ ಸಾಕಷ್ಟು ಲಾಭಗಳಾಗಲಿವೆ. ಎಲ್ಲರೂ ಇದಕ್ಕೆ ಕೈ ಜೋಡಿಸಿ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಕೆರೆ ತುಂಬಿಸುವ ಯೋಜನೆಯನ್ವಯ ಗಿಣಿಗೇರಿ ಕೆರೆಗೆ ನೀರು ತುಂಬಿಸಲಾಗುವುದು. ಶ್ರೀಗಳ ಸಂಕಲ್ಪದಂತೆ ಕೆರೆ ಸುತ್ತ ಬಂಡ್ ಹಾಕಿ, ಗಿಡ ನೆಟ್ಟಲ್ಲಿ ಸಾಕಷ್ಟು ಅನುಕೂಲಗಳಾಗಲಿವೆ. ಅಕ್ಕಪಕ್ಕದ ಗ್ರಾಮಗಳ ಕೆರೆ ತುಂಬಿಸುವಂತೆ ಗ್ರಾಮಸ್ಥರ ಮನವಿಯಿದ್ದು, ಅವುಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಸಿ ಎಸ್.ವಿಕಾಸ್ ಕಿಶೋರ್ ಮಾತನಾಡಿ, ಕೆರೆ ಅಭಿವೃದ್ಧಿಗೆ ಸಹಕರಿಸಿದಂತೆ ಕೆರೆಗೆ ಬರುವ ಹಳ್ಳಕೊಳ್ಳಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ರೈತರು ಸ್ವತಃ ಮುಂದೆ ಬರಬೇಕು. ಅದೇ ನೀವು ಮಾಡುವ ಅತಿದೊಡ್ಡ ಸಹಾಯ. ಕೆರೆ ದೊಡ್ಡದಿದ್ದು, ಇದನ್ನು ಪ್ರವಾಸಿ ತಾಣವಾಗಿಸಬಹುದು. ಇದಕ್ಕಾಗಿ ಡಿಪಿಆರ್ ಮಾಡಿಸಲಾಗುವುದು ಎಂದರು. ಸ್ಥಳದಲ್ಲೇ ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಸೇರಿ ಹಲವರು ಕೆರೆ ಅಭಿವೃದ್ಧಿಗೆ ದೇಣಿಗೆ ನೀಡಿದರು.
ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸಿಇಒ ರಘುನಂದನ್ ಮೂರ್ತಿ, ಎಸ್ಪಿ ಟಿ.ಶ್ರೀಧರ, ಜಿಪಂ ಸದಸ್ಯ ಗೂಳಪ್ಪ ಹಲಗೇರಿ, ಮುಖಂಡ ಕರಿಯಪ್ಪ ಮೇಟಿ ಮಾತನಾಡಿದರು. ಕಿರ್ಲೋಸ್ಕರ್ ಫೆರಸ್‌ಇಂಡಸ್ಟ್ರೀ ಎಂಡಿ ಆರ್.ವಿ.ಗುಮಾಸ್ತೆ, ಎಸಿ ನಾರಾಯಣರಡ್ಡಿ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಡಾ.ಕೆ.ಬಸವರಾಜ, ಬಸವರಾಜ ಗೌರಾ, ಸಿ.ವಿ.ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ ಚಳ್ಳೊಳ್ಳಿ ಸೇರಿ ಇತರರಿದ್ದರು.