ಕೊಪ್ಪಳ ಜಿಲ್ಲೆಯ ವಿವಿಧೆಡೆ ಸಂಭ್ರಮದ ದಸರಾ ಆಚರಣೆ

26102020 Koppal Dasara Festive
Published on

ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನವರಾತ್ರಿ ಅಂಗವಾಗಿ ಆಯುಧಪೂಜೆ ಹಾಗೂ ದಸರಾ ಅಂಗವಾಗಿ ಬನ್ನಿ ಮುಡಿಯುವ ಮೂಲಕ ಸಂಭ್ರಮದಿಂದ ಆಚರಿಸಿದರು.

ಭಾನುವಾರ ಆಯುಧ ಪೂಜೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ವರ್ಗ ಕೃಷಿ ಪರಿಕರಗಳು ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸಿದರು.

ಗವಿಮಠ ಸೇರಿ ಪ್ರಮುಖ ದೇವಾಲಯಗಳಲ್ಲಿ ಭಕ್ತರ ದಂಡು ಕಂಡುಂಬಂತು. ಸಾಕಷ್ಟು ಮಳೆಯಾದ ಕಾರಣ ಹೂವಿನ ಬೆಳೆಗಳು ಹಾಳಾಗಿದ್ದು,ಈ ಬಾರಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಚೆಂಡು, ಸೇವಂತಿ ಮಾರು ಹೂಗೆ 80-100ರೂ., ಮಲ್ಲಿಗೆ, ಕನಕಾಂಬರ ಮೊಳ ಹೂಗೆ 40-50ರೂ. ಬೆಲೆ ಏರಿದ್ದು ಕಂಡುಬಂತು. ವಿವಿಧ ದೇವಸ್ಥಾನಗಳಲ್ಲಿ 9ದಿನಗಳಿಂದ ದೇವಿ ಆರಾಧನೆ ನಡೆಸಿದ್ದು, ಸೋಮವಾರ ದೇವಿ ವಿಗ್ರಹ ವಿಸರ್ಜನಾ ಕಾರ್ಯಕ್ರಮಗಳು ಜರುಗಿದವು.

ಕೊಪ್ಪಳದ ಪಲ್ಲೇದರ ಓಣಿಯ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ವಿಗ್ರಹವನ್ನು ಸರಳ ಮೆರವಣಿಗೆ ಮೂಲಕ ನೆರವೇರಿಸಲಾಯಿತು. ಓಣಿಯ ಮುಖಂಡರು, ಮಹಿಳೆಯರು, ಮಕ್ಕಳು ಎಲ್ಲರು ಸಡಗರದಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಶೋಕ ವೃತ್ತ ಮಾರ್ಗವಾಗಿ ಮೆರವಣಿಗೆ ಮಾಡಲಾಯಿತು. ಸಂಜೆಯಾಗುತ್ತಲೇ ಪರಸ್ಪರ ಬನ್ನಿಪತ್ರಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net