ಅಚ್ಚುಕಟ್ಟಾಗಿ ಗಣತಿ ನಿರ್ವಹಿಸಿ; ಅಧಿಕಾರಿಗಳಿಗೆ ಡಿಸಿ ಸುನಿಲ್ ಕುಮಾರ್ ಸೂಚನೆ

28022020 Koppal Census Work
Published on

ಸೆನ್ಸಸ್ ಕೆಲಸಕ್ಕೆ ಆಯ್ಕೆಯಾದವರಿಗೆ ತರಬೇತಿ

ಕೊಪ್ಪಳ: 2021ರ ಜನಗಣತಿ ಕಾರ್ಯಕ್ಕೆ ನೇಮಕವಾದ ಅಧಿಕಾರಿಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕೆಂದು ಡಿಸಿ ಪಿ.ಸುನಿಲ್ ಕುಮಾರ್ ಸೂಚಿಸಿದರು.

ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗಣತಿ ಕಾರ್ಯಕ್ಕೆ ಆಯ್ಕೆಯಾದ ವಿವಿಧ ಹಂತದ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ 2 ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಎಲ್ಲ ತಹಸೀಲ್ದಾರರು ಗಣತಿ ಕಾರ್ಯದ ಮಾಹಿತಿ ಪಡೆಯಬೇಕು. ಸಮಸ್ಯೆ ಬಂದರೆ ಸಂಬಂಧಿಸಿದ ಅಧಿಕಾರಿಗಳಿಂದ ಪರಿಹಾರ ಪಡೆದುಕೊಳ್ಳಬೇಕು. ಮುಖ್ಯವಾಗಿ ಎನ್‌ಪಿಆರ್, ಎನ್‌ಆರ್‌ಸಿ ಹಾಗೂ ಸಿಎಎ ನಡುವಿನ ವ್ಯತ್ಯಾಸ ಅರಿತಿರಬೇಕು. ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಾಗ ಅನಗತ್ಯ ಗೊಂದಲಕ್ಕೆ ಅವಕಾಶ ನೀಡಬಾರದು. ಗಣತಿಗೆ ಬೇಕಾದ ಮಾಹಿತಿಯನ್ನಷ್ಟೇ ಸಂಗ್ರಹಿಸಬೇಕು. ಅಪರ ಜಿಲ್ಲಾಧಿಕಾರಿ ಜನಗಣತಿ ಪ್ರಕ್ರಿಯೆಯ ಎಲ್ಲ ಹಂತದ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಗಣತಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ತರಬೇಕು ಎಂದರು.

ಎಡಿಸಿ ಎಂ.ಪಿ.ಮಾರುತಿ ಮಾತನಾಡಿ, ಗಣತಿ ಕಾರ್ಯ ಏ.15ರಿಂದ ಆರಂಭವಾಗಿ 18 ತಿಂಗಳು ವಿವಿಧ ಹಂತದಲ್ಲಿ ನಡೆಯಲಿದೆ. ಹೀಗಾಗಿ ಎಲ್ಲ ಕೆಲಸಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆ ರಾಜ್ಯಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರತಿ 500-600 ಜನಸಂಖ್ಯೆ, 150-200 ಮನೆಗಳಿಗೆ ಒಬ್ಬ ಅಧಿಕಾರಿಯನ್ನು ನೇಮಿಸಿ ತರಬೇತಿ ನೀಡಲಾಗುವುದು. ಗಣತಿ ಕಾರ್ಯ ಕುರಿತು ಮಾರ್ಗಸೂಚಿಗಳನ್ನು ನೀಡಲಾಗುವುದು. ಆಂಡ್ರಾಯ್ಡಾ ಮೊಬೈಲ್‌ಗಳಲ್ಲಿ ಅಪ್ಲಿಕೇಶನ್ ಬಳಸಿಕೊಂಡು ದತ್ತಾಂಶಗಳನ್ನು ಅಪ್‌ಲೋಡ್ ಮಾಡಬೇಕಿದ್ದು, ಈ ಬಗ್ಗೆಯೂ ಅರಿತಿರಬೇಕು. ಆಯಾ ಅಧಿಕಾರಿಗಳಿಗೆ ವಹಿಸಿದ ಕೆಲಸವನ್ನು ಶಿಸ್ತು ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ತಿಳಿಸಿದರು.

ಎಸಿ ಸಿ.ಡಿ.ಗೀತಾ, ತಹಸೀಲಾರ್ ಜೆ.ಬಿ.ಮಜ್ಗಿ, ನಗರಸಭೆ ಪೌರಾಯುಕ್ತ ಮಂಜುನಾಥ, ಉಪನ್ಯಾಸಕ ಪ್ರಭುರಾಜ ನಾಯಕ, ಜನಗಣತಿ ನೋಡಲ್ ಅಧಿಕಾರಿಗಳಾದ ಜಲೀಲ್ ಅಹಮದ್, ಶ್ರೀರಾಮುಲು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net