

ಮದ್ದೂರು: ತಾಲೂಕಿನ ಕೊಪ್ಪ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಅನುಸರಿಸಿ ರೈತರು ಕಬ್ಬು ಕಟಾವು ಮಾಡಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿರುವುದಾಗಿ ಪ್ರಧಾನ ವ್ಯವಸ್ಥಾಪಕ ರಾಮಚಂದ್ರರಾವ್ ತಿಳಿಸಿದರು.
ತಾಲೂಕಿನ ಕೊಪ್ಪ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯ ಬಾಯ್ಲರ್‌ಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ಏಳು ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಟನ್ ಕಬ್ಬಿಗೆ ಎಫ್.ಆರ್.ಪಿ ದರ 3290 ರೂ.ಗಳನ್ನು ನಿಗದಿಗೊಳಿಸಿರುವುದಾಗಿ ಹೇಳಿದರು.
ಕಳೆದ ಸಾಲಿನಲ್ಲಿ 6.22 ಲಕ್ಷ ಟನ್ ಕಬ್ಬು ನುರಿದಿದ್ದು, ಕಟಾವು ಮಾಡಿದ ಪ್ರತಿಯೊಬ್ಬ ರೈತರಿಗೂ ಹಂತ ಹಂತವಾಗಿ ಹಣ ಬಟಾವಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ತೊಡಕುಂಟಾಗದಂತೆ ಅಗತ್ಯ ಕ್ರಮ ವಹಿಸಿದ್ದು, ಪ್ರಾರಂಭಿಕ ಹಂತವಾಗಿ ಪೂಜಾ ಕಾರ್ಯ ನೆರವೇರಿಸಿದ್ದು ಜೂನ್ 22ರ ನಂತರ ಕಾರ್ಖಾನೆಯನ್ನು ಪ್ರಾರಂಭಿಸುವುದಾಗಿ ಹೇಳಿದರು.
ಮದ್ದೂರು ತಾಲೂಕು ಸೇರಿದಂತೆ ಮಂಡ್ಯ ತಾಲೂಕಿನ ವಿವಿಧೆಡೆಗಳಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಿದ್ದು ಸಾಗಾಣಿಕೆ ವೆಚ್ಚ ಹಿಂದಿನಂತೆ ದರ ನಿಗದಿಯಾಗಲಿದ್ದು ಟನ್ ಕಬ್ಬಿಗೆ ಬಾಕಿ ಉಳಿಸಿಕೊಂಡಿರುವ 140 ರೂ.ಗಳನ್ನು ವಿತರಣೆ ಮಾಡಲು ಕ್ರಮ ವಹಿಸಲಾಗಿದೆ. ಕಟಾವು ಕಾರ್ಯಕ್ಕೆ ಯಾವುದೇ ತೊಡಕುಂಟಾಗದಂತೆ ಬಳ್ಳಾರಿಯಿಂದ ಕೂಲಿ ಕಾರ್ಮಿಕರನ್ನು ಕರೆತರಲು ಹಾಗೂ ಅಧಿಕ ಇಳುವರಿ ಕೊಡುವ ವಿ.ಸಿ.ಎಫ್.ಓ 5-17 ತಳಿಯ ಬಿತ್ತನೆ ವಿತರಿಸಲು ಕ್ರಮ ವಹಿಸಿದ್ದು, ಒಂದು ಎಕರೆಗೆ ಐದು ಸಾವಿರ ಕಬ್ಬಿನ ಸಸಿಗಳನ್ನು ಕಾರ್ಖಾನೆ ವತಿಯಿಂದ ವಿತರಿಸಲಾಗಿದೆ ಎಂದರು.
ಕಾರ್ಖಾನೆ ಆರಂಭಿಸಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಕಬ್ಬನ್ನು ಕಟಾವು ಮಾಡುವಂತೆ ಮತ್ತು ನಿಗದಿತ ವೇಳೆಯಲ್ಲಿ ರೈತರಿಗೆ ಹಣ ಸಂದಾಯ ಮಾಡಲು ಕ್ರಮ ವಹಿಸಿದ್ದು, ಯಾವುದೇ ನ್ಯೂನ್ಯತೆಗಳು ಕಂಡು ಬರದಂತೆ ಅಧಿಕಾರಿಗಳು ಕ್ರಮ ವಹಿಸಿರುವುದಾಗಿ ಮಾಹಿತಿ ನೀಡಿದರು.
ಕಬ್ಬು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್, ಉಪ ವ್ಯವಸ್ಥಾಪಕ ಗೌರಿಪ್ರಕಾಶ್ ಇತರರಿದ್ದರು.