

ಮದ್ದೂರು: ವಿದ್ಯಾರ್ಥಿಗಳು ಪದವಿಗಳನ್ನು ಪಡೆದರೆ ಸಾಲದು. ಭವಿಷ್ಯದ ಬದುಕಿಗಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಅದಕ್ಕಾಗಿ ಯೋಜನೆಗಳನ್ನು ರೂಪಿಸಿಕೊಳ್ಳುವುದು ಅತ್ಯವಶ್ಯಕ ಎಂದು ತಲಕಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ ಹೇಳಿದರು.
ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ‘ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳೋದು ಹೇಗೆ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ವಾಣಿಜ್ಯ ಶಾಸ್ತ್ರ ವಿಷಯ ಉದ್ಯೋಗಾವಕಾಶದ ಅನೇಕ ಸಾಧ್ಯತೆಗಳನ್ನು ಕಲ್ಪಿಸಿಕೊಡುತ್ತದೆ. ಸರ್ಕಾರಿ ಉದ್ಯೋಗಕ್ಕಾಗಿ ಕಾಯದೆ ಖಾಸಗಿಯಾಗಿಯೂ ಅಥವಾ ಸ್ವತಂತ್ರ ಬಂಡವಾಳದಿಂದಲೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು. ಆದರೆ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಮನೋಭಾವ ಇರಬೇಕೆಂದರು. ಪ್ರಸ್ತುತ ನೂರಾರು ಕಂಪನಿಗಳು ಸಾವಿರಾರು ಉದ್ಯೋಗಗಳನ್ನು ಕಲ್ಪಿಸಿಕೊಡುತ್ತಿವೆ. ಆಯ್ಕೆ, ಶ್ರಮ ನಮ್ಮದಾಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಉಮೇಶ್, ವಿದ್ಯಾರ್ಥಿಗಳು ಬದುಕಿನ ಬಗ್ಗೆ ಭರವಸೆ ಹೊಂದುವುದು ಅತ್ಯವಶ್ಯಕ. ಸಾಧಕರನ್ನು ಮಾದರಿಯಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮಂಜುಳಾ, ಸೌಮ್ಯಾ ಕೆಂಪೇಗೌಡ ಉಪಸ್ಥಿತರಿದ್ದರು.