ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ದೊರೆತ ಸೇತುವೆ ಭಾಗ್ಯ

MDK06
Published on

ಮಡಿಕೇರಿ: ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ಸೇತುವೆ ಭಾಗ್ಯ ದೊರೆತಿದೆ.


ಕಳೆದ ೧೫ ವರ್ಷಗಳಿಂದ ದೊಡ್ಡ ಹೊಳೆಯನ್ನು ದಾಟಲು ಗ್ರಾಮಸ್ಥರು ಪಡುತ್ತಿದ್ದ ಹರಸಾಹಸದ ಕುರಿತು ೨೦೨೨ ಜೂನ್ ತಿಂಗಳಿನಲ್ಲಿ ಪತ್ರಿಕೆ ವರದಿ ಮಾಡಿತ್ತು. ಇದರ ಫಲಶ್ರುತಿಯಾಗಿ ಲೋಕೋಪಯೋಗಿ ಇಲಾಖೆ ರೂ.೩೫ ಲಕ್ಷ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಾಣ ಮಾಡಿದೆ. ನೂತನ ಸೇತುವೆಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.


೨೦೨೧ರಲ್ಲಿ ತಲಕಾವೇರಿ ಭಾಗದಲ್ಲಿ ಮಹಾಮಳೆಯಿಂದ ಅನಾಹುತ ಸಂಭವಿಸಿದಾಗ ಕೋಪಟ್ಟಿ ಭಾಗದ ದೊಡ್ಡ ಹೊಳೆಯಲ್ಲಿ ಪ್ರವಾಹದ ರೂಪದಲ್ಲಿ ನೀರು ಹರಿದು ಬಂದಿತ್ತು. ಜೀವ ಉಳಿಸಿಕೊಳ್ಳಬೇಕೆಂದರೆ ಅಥವಾ ತುರ್ತು ಚಿಕಿತ್ಸೆಗೆ ತೆರಳಬೇಕೆಂದರೆ ಯಾವುದೇ ಮಾರ್ಗದ ವ್ಯವಸ್ಥೆ ಇಲ್ಲಿರಲಿಲ್ಲ. ಎಲ್ಲಾ ಸಂದರ್ಭದಲ್ಲೂ ಹೊಳೆ ದಾಟುವುದು ಅನಿವಾರ್ಯವಾಗಿತ್ತು. ಇದರಿಂದ ವಯೋವೃದ್ಧರು ಹಾಗೂ ಮಕ್ಕಳು ಕಷ್ಟಪಡುತ್ತಿದ್ದರು.


೨೦೨೨ ರಲ್ಲಿಯೂ ಮಹಾಮಳೆಯಿಂದ ಸಂಕಷ್ಟ ಎದುರಾಗಬಹುದೆನ್ನುವ ಆತಂಕದಲ್ಲಿ ಕೋಪಟ್ಟಿಯ ಸೋಮೆಟ್ಟಿ, ದಾಯನ ಹಾಗೂ ಪೊಡನೋಲನ ಕುಟುಂಬಸ್ಥರು ಸುರಿಯುವ ಗಾಳಿಮಳೆಯ ನಡುವೆಯೇ ಹೊಳೆಗೆ ಕಾಲು ಸೇತುವೆಯನ್ನು ನಿರ್ಮಿಸಿದರು. ಗ್ರಾಮಸ್ಥರ ಸಹಕಾರದೊಂದಿಗೆ ಬಿದಿರು ಮತ್ತು ಮರದ ತುಂಡುಗಳನ್ನು ಬಳಸಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸುತ್ತಿದ್ದಾಗ ಪತ್ರಿಕೆ ಈ ಕುರಿತು ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು. ಗ್ರಾಮಸ್ಥರ ಸಂಕಷ್ಟದ ಸಂಪರ್ಕ ವ್ಯವಸ್ಥೆ ಕುರಿತು ಪತ್ರಿಕೆ ವರದಿ ಮಾಡಿದ ಏಳು ತಿಂಗಳಿನಲ್ಲೇ ನೂತನ ಸೇತುವೆ ನಿರ್ಮಾಣಗೊಂಡಿದೆ.


ನೂತನ ಸೇತುವೆ ಉದ್ಘಾಟನೆ: ನೂತನ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಗ ಈಡೇರಿದೆ. ಮಳೆಗಾಲದಲ್ಲಿ ಈ ಭಾಗದ ಜನರು ಸಂಪರ್ಕ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದರು. ಇದೀಗ ನೂತನ ಸೇತುವೆ ನಿರ್ಮಾಣದ ಮೂಲಕ ಸಮಸ್ಯೆ ಬಗೆ ಹರಿದಿದೆ. ಆದರೆ ಕೆಲವು ರಸ್ತೆಗಳು ಹದಗೆಟ್ಟಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣದ ಅಗತ್ಯವಿದೆ. ಅಲ್ಲದೆ ಇಲ್ಲಿನ ಮತ್ತೊಂದು ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮುಂದಿನ ದಿನಗಳಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಸನ್ಮಾನ: ನೂತನ ಸೇತುವೆ ನಿರ್ಮಾಣಕ್ಕೆ ಕಾಳಜಿ ತೋರಿದ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಕುಂದಚೇರಿ ಗ್ರಾ.ಪಂ ಅಧ್ಯಕ್ಷೆ ಸವಿತಾ ಉದಯಕುಮಾರ್, ಸದಸ್ಯರಾದ ಪಿ.ಬಿ.ದಿನೇಶ್, ಬೇಬಿ ಪೊನ್ನಪ್ಪ, ಅಯ್ಯಂಗೇರಿ ಗ್ರಾ.ಪಂ ಅಧ್ಯಕ್ಷ ರಂಜು, ಭಾಗಮಂಡಲ ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಪ್ರಮುಖರಾದ ಕಾಡಂಡ ಭೀಮಯ್ಯ, ಡಲೇಶ್ ಕುಮಾರ್, ದಾಯನ ಹರ್ಷವರ್ಧನ್, ಉತ್ತಪ್ಪ, ಶ್ರೀಧರ್ ಮತ್ತಿತರ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net