

ನವೀನ್ ಬಿಲ್ಗುಣಿ ಶಿವಮೊಗ್ಗ
ನರೇಗಾ ಯೋಜನೆಯಡಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕೂಲಿ ಕಾರ್ಮಿಕರ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಗ್ರಾಪಂ ಮಟ್ಟದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಲು ಮುಂದಾಗಿರುವ ‘ಕೂಸಿನಮನೆ’(ಶಿಶುಪಾಲನಾ ಕೇಂದ್ರ) ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭದಲ್ಲೇ ವಿಘ್ನ ಎದುರಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿದಂತೆ ರಾಜ್ಯದ 13 ಜಿಲ್ಲೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮೂಲಕ ಆಯ್ಕೆಯಾದ ಎಲ್ಲ ಜಿಲ್ಲೆಗಳಲ್ಲೂ ಆ.15ರಂದು ಏಕಕಾಲಕ್ಕೆ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಆದರೆ ಶಿವಮೊಗ್ಗದಲ್ಲಿ ಯೋಜನೆ ಅನುಷ್ಠಾನವಿರಲಿ, ಪ್ರಾಥಮಿಕ ಹಂತದ ಸಿದ್ಧತೆಗಳೂ ಆಗಿಲ್ಲ. ಕೇಂದ್ರಗಳ ದುರಸ್ತಿಗೆ ಅನುದಾನ ಬಿಡುಗಡೆ ಆಗದೆ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗುವುದು ನಿಶ್ಚಿತವಾಗಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಮತ್ತು ಶಿಶುಗಳ ಮರಣ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡಿತ್ತು. ಗ್ರಾಪಂ ಮಟ್ಟದಲ್ಲಿ ನರೇಗಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ 6 ತಿಂಗಳಿಂದ ಮೂರು ವರ್ಷದೊಳಗಿನ ಗ್ರಾಮೀಣ ಮಕ್ಕಳ ಪೋಷಣೆ, ಆರೈಕೆ, ಸುರಕ್ಷತೆಗಾಗಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿತ್ತು. ಆದರೆ ಜಿಲ್ಲೆಯಲ್ಲಿ ಈ ಯೋಜನೆ ಇನ್ನೂ ಸರ್ವೇ ಹಂತವನ್ನೂ ದಾಟಿಲ್ಲ.
ಪ್ರತಿ ಕೇಂದ್ರಗಳಿಗೂ ಸಮಿತಿ ರಚನೆ
ಶಿಶುಪಾಲನಾ ಕೇಂದ್ರಗಳ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗೆ ಜಿಪಂ ಸಿಇಒಗಳ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗುತ್ತದೆ. ಅವರ ಕೆಳಗೆ ಮೂಲಸೌಲಭ್ಯ ಹೊಂದಿರುವ ಗ್ರಾಪಂಗಳನ್ನು ಗುರುತಿಸಲು ತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ ಇರಲಿದೆ. ತದನಂತರ ನರೇಗಾ ಸಹಾಯಕ ನಿರ್ದೇಶಕರು, ಪಿಡಿಒ ಹಾಗೂ ಗ್ರಾಪಂ ಸಿಬ್ಬಂದಿ ಒಳಗೊಂಡ ಸಮಿತಿ ರಚಿಸಿ ಅಗತ್ಯಕ್ಕೆ ಅನುಗುಣವಾಗಿ ಕೇಂದ್ರಗಳನ್ನು ತೆರೆಯಬೇಕಿದೆ. ಕೇಂದ್ರಗಳಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯರು ಕಾಲಕಾಲಕ್ಕೆ ಮಕ್ಕಳ ತಪಾಸಣೆ ಮಾಡಿ ವಯಸ್ಸು, ತೂಕ ಆಧರಿಸಿ ಸಮತೋಲನ ಆಹಾರ ನೀಡಲು ಸಲಹೆ ನೀಡಬೇಕು. ಪೌಷ್ಟಿಕಾಂಶ ಕೊರತೆ ದೂರವಾಗಿಸಲು ಒತ್ತು ನೀಡಬೇಕು.
ದುರಸ್ತಿಗೆ ತಲಾ 1 ಲಕ್ಷ ರೂ.
ಮೊದಲ ಹಂತದಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಕೂಸಿನಮನೆ ಯೋಜನೆ ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅದಕ್ಕಾಗಿ ಕೇಂದ್ರಗಳ ದುರಸ್ತಿಗೆ ತಲಾ 1 ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿತ್ತು. ನರೇಗಾ ಯೋಜನೆಯಡಿ ಕೆಲಸ ಮಾಡುವ ಎಸ್ಸೆಸ್ಸೆಲ್ಸಿ ಓದಿರುವ ಮಹಿಳೆಗೆ ಮಕ್ಕಳ ಪಾಲನೆ ಜವಾಬ್ದಾರಿ ನೀಡಬೇಕು. 15ನೇ ಹಣಕಾಸು ಯೋಜನೆಯಡಿ ಗ್ಯಾಸ್ ಸಿಲಿಂಡರ್, ಪೀಠೋಪಕರಣ ಮತ್ತಿತರ ವಸ್ತುಗಳ ಖರೀದಿ ಮಾಡಬಹುದು.
ಪ್ರತಿ ಕೇಂದ್ರದಲ್ಲಿ 30 ಮಕ್ಕಳ ಪಾಲನೆ
ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನೂ ಜತೆಯಲ್ಲೇ ಕರೆದೊಯ್ಯುತ್ತಿದ್ದರು. ಅದನ್ನು ತಪ್ಪಿಸುವ ಸಲುವಾಗಿ ಅಂತಹ ಮಕ್ಕಳ ಪಾಲನೆ ಹಾಗೂ ಪೋಷಣೆಗಾಗಿ ಕೂಸಿನಮನೆ ತೆರೆಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಗುರುತಿಸಿ ಕೇಂದ್ರ ಸ್ಥಾಪಿಸಲು ಸರ್ಕಾರ ಸೂಚಿಸಿದೆ. ಕೂಸಿನ ಮನೆಗೆ ಆರೈಕೆದಾರರನ್ನು ನೇಮಕ ಮಾಡಿಕೊಳ್ಳಬೇಕು. ಸರ್ಕಾರದಿಂದ ಪ್ರತ್ಯೇಕವಾಗಿ ಗೌರವಧನ ನೀಡದೆ ನರೇಗಾ ಯೋಜನೆಯಡಿ ಎನ್‌ಎಂಆರ್ ಸೃಜನೆ ಮಾಡಿ ದಿನಕ್ಕೆ 316 ರೂ.ನಂತೆ ನೂರು ದಿನಗಳವರೆಗೆ ಕೆಲಸ ನೀಡಲಾಗುತ್ತದೆ. ಜಾಬ್‌ಕಾರ್ಡ್ ಆಧಾರದ ಮೇಲೆ ವರ್ಷವಿಡೀ ಕಾರ್ಯಪಾಲನೆಗೆ ಆರೈಕೆದಾರರನ್ನು ನೇಮಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ 30 ಮಕ್ಕಳ ಪಾಲನೆ ನಡೆಯಲಿದ್ದು ತಿಂಗಳಲ್ಲಿ 26 ದಿನ ಪ್ರತಿದಿನ 6ರಿಂದ 8 ತಾಸು ಕೇಂದ್ರಗಳು ಕಾರ್ಯನಿರ್ವಹಿಸಲಿವೆ.ಶಿವಮೊಗ್ಗ ಜಿಲ್ಲೆಯಲ್ಲಿ ಕೂಸಿನಮನೆ ಯೋಜನೆಗೆ ಕೇಂದ್ರಗಳನ್ನು ತೆರೆಯಲು ಸರ್ವೇ ನಡೆಯುತ್ತಿದೆ. ಶೌಚಗೃಹ ಸೇರಿದಂತೆ ಕೇಂದ್ರಗಳ ದುರಸ್ತಿಗೆ ಇನ್ನೂ ಅನುದಾನ ಬಿಡುಗಡೆ ಆಗಿಲ್ಲ. ಹಾಗಾಗಿ ಯೋಜನೆ ಕೊಂಚ ವಿಳಂಬವಾಗಿದೆ.ಆರ್.ಬಿ.ನಂದಿನಿ, ಜಿಪಂ ಯೋಜನಾ ನಿರ್ದೇಶಕಿ