

ಮಂಡ್ಯ: ಗ್ರಾಮೀಣ ಪ್ರದೇಶದಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಅವರ ಮಕ್ಕಳ ಸುರಕ್ಷತೆ ಮತ್ತು ಪೋಷಣೆ ಅಗತ್ಯವಾಗಿದೆ. ಆದ್ದರಿಂದ ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ವಿಕಾಸದ ಹಿತದೃಷ್ಟಿಯಿಂದ ಕೂಸಿನ ಮನೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಹಾಗೂ ತಾಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ಮೊಳೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಬುಧವಾರ ಕೂಸಿನ ಮನೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಮತ್ತು ನರೇಗಾ ಯೋಜನೆಯಡಿ ಮಹಿಳೆಯರು ಕೂಲಿ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಹಾಗೂ ಸೌಕರ್ಯ ಕಲ್ಪಿಸುವುದರ ಜತೆಗೆ ಅವರ ಮಕ್ಕಳ ಆರೋಗ್ಯ ಪೌಷ್ಟಿಕತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕೂಸಿನ ಮನೆ ಪ್ರಾರಂಭಿಸಲಾಗಿದೆ ಎಂದರು.
ಜಿಲ್ಲೆಯ 109 ಗ್ರಾಮ ಪಂಚಾಯಿತಿಯಲ್ಲಿ ಕೂಸಿನ ಮನೆ ಕೇಂದ್ರ ಸ್ಥಾಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ತಲಾ 1 ಲಕ್ಷ ರೂನಂತೆ 1,9 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 109 ಗ್ರಾಪಂ ಪೈಕಿ 21 ಗ್ರಾಪಂನಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ. ಆರೈಕೆದಾರರು ಮಕ್ಕಳ ಪೋಷಣೆ ಮಾಡಲು ನರೇಗಾ ಯೋಜನೆಯ ದಿನಗೂಲಿ 316 ರೂಗಳಂತೆ ಕೂಲಿ ಪಾವತಿಸಲಾಗುತ್ತದೆ. ಜತೆಗೆ 100 ದಿನ ಕೆಲಸ ಕೂಡ ಸಿಗುವುದರಿಂದ ಆರ್ಥಿಕವಾಗಿ ಮಹಿಳೆಯರು ಸಬಲರಾಗುತ್ತಾರೆ ಎಂದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕೂಸಿನ ಮನೆ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಲು ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದರು.
ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಇತರರಿದ್ದರು.