

ಮಂಡ್ಯ: ಗ್ರಾಮೀಣ ಭಾಗದಲ್ಲಿ ಮೂರು ವರ್ಷದೊಳಗಿನ ಮಕ್ಕಳ ಪಾಲನೆ ಹಾಗೂ ಪೋಷಣೆ ಮಾಡುವ ಉದ್ದೇಶದೊಂದಿಗೆ ಜಿಲ್ಲೆಯ 21 ಗ್ರಾಮ ಪಂಚಾಯಿತಿಯಲ್ಲಿ ಶಿಶುಪಾಲನಾ ಕೇಂದ್ರ(ಕೂಸಿನ ಮನೆ) ತೆರೆಯಲು ಜಿಲ್ಲಾ ಪಂಚಾಯಿತಿ ಸಿದ್ಧತೆ ಮಾಡಿಕೊಂಡಿದೆ. ಅಂತೆಯೇ ಆ.15ರಂದು ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.
ಕಳೆದ ವರ್ಷ ನರೇಗಾ ಯೋಜನೆಯಡಿ 10 ಸಾವಿರ ಮಾನವ ದಿನಗಳನ್ನು ಸೃಜನೆ ಮಾಡಿರುವ ಗ್ರಾಪಂನಲ್ಲಿ ಮಾತ್ರ ಕೂಸಿನ ಮನೆ ತೆರೆಯುವ ಅವಕಾಶ ನೀಡಲಾಗಿದೆ. ಅದರಂತೆ ಜಿಲ್ಲೆಯ 109 ಗ್ರಾಪಂಗಳು ಅರ್ಹತೆ ಹೊಂದಿದ್ದರೂ, ಮೊದಲ ಹಂತದಲ್ಲಿ 21ರಲ್ಲಿ ಪ್ರಾರಂಭವಾಗುತ್ತಿದೆ. ಮುಂದಿನ ಹಂತದಲ್ಲಿ ಅಂದರೆ ಅ.2, ನ.1 ಮತ್ತು 2024 ಜನವರಿ 26ರಂದು ಉಳಿದೆಡೆಯೂ ಚಾಲನೆ ಸಿಗಲಿದೆ. ಇದರ ಉಸ್ತುವಾರಿಯನ್ನು ನರೇಗಾ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಡಿಕೊಳ್ಳಲಿದೆ.
ಏನಿದು ಕೂಸಿನ ಮನೆ?: ಗ್ರಾಮೀಣ ಭಾಗದಲ್ಲಿ ಪಾಲಕರಿಗೆ ಅನುಕೂಲ ಮಾಡುವ ಉದ್ದೇಶದಿಂದಲೇ ಯೋಜನೆ ರೂಪಿಸಲಾಗಿದೆ. ಅಂದರೆ 3 ವರ್ಷದೊಳಗಿನ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಬಹುತೇಕ ಪಾಲಕರು ಮನೆಯಲ್ಲೇ ಉಳಿಯುತ್ತಾರೆ. ಆದ್ದರಿಂದ ಅವರು ಕೂಲಿ ಕೆಲಸ, ಉದ್ಯೋಗಕ್ಕೆ ಹೋಗಲು ಅವಕಾಶ ಕಲ್ಪಿಸುವುದು, ಕಾರ್ಮಿಕರ ವಲಸೆ ತಪ್ಪಿಸುವುದು, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಶಿಕ್ಷಣ ನೀಡುವುದರ ಜತೆಗೆ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವುದಾಗಿದೆ. ಈ ಸೌಲಭ್ಯವನ್ನು ಯಾರು ಬೇಕಾದರೂ ಪಡೆಯಬಹುದು.
ಈವರೆಗೆ ನಗರ/ಪಟ್ಟಣಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಇನ್ನು ಮುಂದೆ ಗ್ರಾಮ ಮಟ್ಟದಲ್ಲಿಯೇ ಪಾಲನೆ ಕೇಂದ್ರ ತೆರೆಯುತ್ತಿವೆ. ಈಗಾಗಲೇ ಪ್ರತಿ ಹಳ್ಳಿಗಳಲ್ಲೂ ಅಂಗನವಾಡಿ ಕೇಂದ್ರಗಳಿವೆ. ಅಲ್ಲಿ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕೂಸಿನ ಮನೆಗಳಿಗೆ ಮೂರು ವರ್ಷದೊಳಗಿನ ತಮ್ಮ ಮಕ್ಕಳನ್ನು ಬಿಟ್ಟು ಉದ್ಯೋಗಕ್ಕೆ ಹೋಗಬಹುದು. ಇನ್ನು ಈ ಮನೆಗಳಿಗೆ ಕಲಿಕಾ ಸಾಮಗ್ರಿಗಳು, ಆಟಿಕೆಗಳು, ಮಲಗಲು ಮ್ಯಾಟ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಸರ್ಕಾರಿ ಕಚೇರಿಗಳನ್ನು ಕೂಸಿನ ಮನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಗೋಡೆಗಳನ್ನು ಬಣ್ಣಗಳು, ಚಿತ್ರಗಳಿಂದ ಅಲಂಕರಿಸಿ ಆಕರ್ಷಿಸುವಂತೆ ಮಾಡಲಾಗುತ್ತಿದೆ.
ಕೇರ್ ಟೇಕರ್ಸ್ ನೇಮಕ: ಮಕ್ಕಳನ್ನು ನೋಡಿಕೊಳ್ಳಲು ನರೇಗಾ ಯೋಜನೆಯಡಿ ಜಾಬ್‌ಕಾರ್ಡ್ ಹೊಂದಿರುವ 8 ಮಹಿಳೆಯರನ್ನು ಗುರುತಿಸಿ ಅದರಲ್ಲಿ ಇಬ್ಬರನ್ನು ಕೇರ್ ಟೇಕರ್ಸ್ ಆಗಿ ನೇಮಕ ಮಾಡಲಾಗುತ್ತಿದೆ. ಇವರು ರೊಟೇಷನ್ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಆಯ್ಕೆ ಪ್ರಕ್ರಿಯೆಯಲ್ಲಿ 20-45 ವರ್ಷದೊಳಗಿನವರು ಹಾಗೂ ಶಿಶುಪಾಲನಾ ಕೇಂದ್ರದ ಹತ್ತಿರದಲ್ಲಿ ವಾಸವಾಗಿರುವವರಿಗೆ ಆದ್ಯತೆ ನೀಡಲಾಗಿದೆ. ಪ್ರಮುಖವಾಗಿ ಅಗತ್ಯ ದಾಖಲೆಗಳ ನಿರ್ವಹಣೆ ಕಾರಣಕ್ಕಾಗಿ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರುವ, ಶಿಶುಗಳ/ಮಕ್ಕಳ ಆರೈಕೆ, ಪೋಷಣೆಯ ಅನುಭವ ಹೊಂದಿರುವ ಹಾಗೂ ಚಿಕ್ಕಮಕ್ಕಳನ್ನು ನಿರ್ವಹಿಸುವ ಅವರ ಕೌಶಲತೆ ಹಾಗೂ ನಡವಳಿಕೆಯನ್ನು ಪರಿಶೀಲಿಸಿ, ಉತ್ತಮರಾಗಿರುವರ ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 69 ಜನರನ್ನು ಕೇರ್ ಟೇಕರ್ಸ್ ಆಗಿ ಆಯ್ಕೆ ಮಾಡಲಾಗುತ್ತಿದೆ. ಮಾತ್ರವಲ್ಲದೆ ಅವರಿಗೆ ತರಬೇತಿ ನೀಡಲಾಗಿದೆ.
ಯಾವ್ಯಾವ ಗ್ರಾಪಂ ಆಯ್ಕೆ?: ಮಂಡ್ಯ ತಾಲೂಕಿನಲ್ಲಿ ತಗ್ಗಹಳ್ಳಿ, ಕೊತ್ತತ್ತಿ, ಇಂಡುವಾಳು, ಮದ್ದೂರಿನಲ್ಲಿ ಕೆ.ಎಂ.ದೊಡ್ಡಿ, ಅಣ್ಣೂರು, ಕೆ.ಶೆಟ್ಟಹಳ್ಳಿ, ಕ್ಯಾತಘಟ್ಟ, ಮಳವಳ್ಳಿಯಲ್ಲಿ ಬಂಡೂರು, ದುಗ್ಗನಹಳ್ಳಿ, ನೆಲಮಾಕನಹಳ್ಳಿ, ಕಂದೇಗಾಲ, ಶ್ರೀರಂಗಪಟ್ಟಣದಲ್ಲಿ ಸಬ್ಬನಕುಪ್ಪೆ, ಮೇಳಾಪುರ, ಪಾಂಡವಪುರದಲ್ಲಿ ಗುಮ್ಮನಹಳ್ಳಿ, ಸುಂಕಾತೊಣ್ಣೂರು, ಕೆ.ಆರ್.ಪೇಟೆಯಲ್ಲಿ ಲಕ್ಷ್ಮೀಪುರ, ಮಂದಗೆರೆ, ಐಕನಹಳ್ಳಿ ಹಾಗೂ ನಾಗಮಂಗಲ ತಾಲೂಕಿನ ಕರಡಹಳ್ಳಿ, ಹುಲಿಕೆರೆ, ಮಣ್ಣಹಳ್ಳಿ ಗ್ರಾಪಂ ಆಯ್ಕೆಯಾಗಿದೆ.