

ಗೋಣಿಕೊಪ್ಪ : ಅರಾಯಿರ ನಾಡ್‌ರ ವಾರ್ಷಿಕ ಪುತ್ತರಿ ಕೋಲಾಟ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್ ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗಳಾಗಿ ವಿಂಗಡಣೆಗೊಂಡು 17 ಗ್ರಾಮದ ಒಕ್ಕೂಟದ ಪುತ್ತರಿ ಕೋಲಾಟ ವಿರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ಪ್ರದರ್ಶನಗೊಂಡಿದ್ದು ಗಮನ ಸೆಳೆಯಿತು.
ಕೊಡಗಿನ ಸಾಂಪ್ರದಾಯಕ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಕೋಲು ಹಿಡಿದ ವಿವಿಧ ಗ್ರಾಮಗಳಿಂದ ಆಗಮಿಸಿದ ಪ್ರತಿನಿಧಿಗಳಿಗೆ ಸಾಂಪ್ರದಾಯಿಕ ಓಲಗ ತಂಡ ಸ್ವಾಗತ ಕೋರಿತು. ಮಂದ್‌ನ ಹೃದಯ ಭಾಗದಲ್ಲಿರುವ ಆಲದ ಮರಕ್ಕೆ ಹಿರಿಯರು ಪ್ರಥಮ ಪೂಜೆ ಸಲ್ಲಿಸಿದರು. ನಂತರ 4 ಭಾಗದ ತಂಡಗಳು ಕೋಲಾಟದಲ್ಲಿ ಸಂಭ್ರಮದಿಂದ ಪಾಲ್ಗೊಂಡವು. ವಿಜೇತ ತಂಡಕ್ಕೆ ಮತ್ತು ಕೊಡಗಿನ ಸಾಂಪ್ರದಾಯಕ ಉಡುಗೆ ತೊಟ್ಟು ಆಗಮಿಸಿದ ಮಹಿಳೆಯರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.
ಆರಾಯಿರ ನಾಡ್ ಪೂಮಾಲೆ ಮಂದ್ ಸಮಿತಿ ಧ್ಯಕ್ಷ ಅಜ್ಜಿನಿಕಂಡ ಸುಧೀರ್, ಉಪಾಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ, ಕಾರ್ಯದರ್ಶಿ ಮಾಚೆಟ್ಟೀರ ತಮ್ಮಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ಚೇಂದಂಡ ಜಿ. ಪೊನ್ನಪ್ಪ, ಕೊಳುವಂಡ ಕಾರ್ಯಪ್ಪ, ಮುಕ್ಕಾಟೀರ ಮುತ್ತು, ವಸಂತ್ ಕಟ್ಟಿ, ಪೊನ್ನಕಚ್ಚಿರ ಸೋಮಯ್ಯ ಇತರರು ಇದ್ದರು. ವಿವಿಧ ಗ್ರಾಮದ ಜನರು ಹಾಜರಿದ್ದು, ಕೋಲಾಟ ಪ್ರದರ್ಶನಕ್ಕೆ ಉತ್ತೇಜಿಸಿದರು.