ಅಂಬಿಕಾಪುರ ಸೈನಿಕ ಶಾಲೆ ಚಾಂಪಿಯನ್

14mdkj2 - Copy
Published on

ವಿಜಯವಾಣಿ ಸುದ್ದಿಜಾಲ ಕುಶಾಲನಗರ

ಕೂಡಿಗೆ ಸೈನಿಕ ಶಾಲೆಯಲ್ಲಿ ಜ.೧೦ ರಿಂದ ೧೩ ರವರೆಗೆ ಆಯೋಜಿಸಿದ್ದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ವಲಯ ವಾಲಿಬಾಲ್ ಕ್ರೀಡಾಕೂಟದಲ್ಲಿ ಅಂಬಿಕಾಪುರ ಸೈನಿಕ ಶಾಲೆ (ಛತ್ತಿಸ್‌ಗಢ) ಪ್ರಥಮ ಸ್ಥಾನ ಪಡೆಯಿತು.

ಪುರ್ಲಿಯಾ ಸೈನಿಕ ಶಾಲೆ (ಪಶ್ಚಿಮ ಬಂಗಾಳ) ದ್ವಿತೀಯ ಸ್ಥಾನ ಪಡೆಯಿತು. ಅಂಬಿಕಾಪುರ ಸೈನಿಕ ಶಾಲೆಯ ಕ್ರೀಡಾಪಟು ಕೆಡೆಟ್ ಶಶಾಂಕ್ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.

ಕ್ರೀಡಾಕೂಟದಲ್ಲಿ ನಗರೋಟ ಸೈನಿಕ ಶಾಲೆ (ಉತ್ತರ ವಲಯ), ಕಲ್ಕೆರಿ ಸೈನಿಕ ಶಾಲೆ (ದಕ್ಷಿಣ ವಲಯ), ಚಿತ್ತೋರ್‌ಘರ ಸೈನಿಕ ಶಾಲೆ (ಪಶ್ಚಿಮ ವಲಯ), ಪುರ್ಲಿಯಾ ಸೈನಿಕ ಶಾಲೆ (ಪೂರ್ವ ವಲಯ) ಹಾಗೂ ಅಂಬಿಕಾಪುರ ಸೈನಿಕ ಶಾಲಾ (ಮಧ್ಯ ವಲಯ) ತಂಡಗಳು ಪಾಲ್ಗೊಂಡಿದ್ದವು.

ಕೂಡಿಗೆ ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಿರಂಜನ್ ಮೂರ್ತಿ ಪಾಲ್ಗೊಂಡಿದ್ದರು.

ನಿರಂತರ ಪ್ರಯತ್ನ, ಕ್ರೀಡಾ ಸ್ಪೂರ್ತಿ ಮತ್ತು ಸಾಂಘಿಕ ಹೋರಾಟವಿದ್ದರೆ ಯಾವುದೇ ಸ್ಪರ್ಧೆ ಇದ್ದರೂ ಗೆಲುವು ಶತಸಿದ್ಧ ಎಂದು ಸಿಎಫ್ ಹೇಳಿದರು. ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಮಧ್ಯೆ ಸಮತೋಲನವಿರಬೇಕು. ವಿದ್ಯಾರ್ಥಿಗಳು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಮರಗಿಡ ಉಳಿಸಿ, ಬೆಳೆಸುವುದರೊಂದಿಗೆ ತಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಪ್ಲಾಸ್ಟಿಕ್ ವಸ್ತುಗಳು ಇಂದಿನ ಪರಿಸರ ಸಮತೋಲನಕ್ಕೆ ಮಾರಕವಾಗಿದ್ದು, ನಮ್ಮ ಆರೋಗ್ಯಯುತ ಬದುಕಿಗೆ ಹಾನಿಕಾರಕವಾಗಿವೆ. ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು.

ಪ್ರಭಾರ ಉಪಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಹಿರಿಯ ಶಿಕ್ಷಕ ಗೋವಿಂದರಾಜ, ಕ್ರೀಡಾ ವಿಭಾಗದ ಮೇಲ್ವಿಚಾರಕ ಜಿ.ಕೆ. ಮಂಜಪ್ಪ, ದೈಹಿಕ ಶಿಕ್ಷಕ ಬಿ.ಎಚ್.ಎಂ. ರನೀಶ್, ಸಿ.ಎಚ್.ಎಂ. ಸ್ಟಾಲಿನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net