

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೂಡಿಗೆ ಸೈನಿಕ ಶಾಲೆಯಲ್ಲಿ ನಿರ್ಮಾಣಗೊಂಡಿರುವ ಫಿಫಾ ಪ್ರಮಾಣೀಕೃತ ಮರಿಯಪ್ಪ ಕೆಂಪಯ್ಯ ಪುಟ್ಬಾಲ್ ಕ್ರೀಡಾಂಗಣವನ್ನು ಗುರುವಾರ ಭಾರತೀಯ ವಾಯುದಳ ತರಬೇತಿ ವಿಭಾಗದ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಉದ್ಘಾಟಿಸಿದರು.
ಕೂಡಿಗೆ ಸೈನಿಕ ಶಾಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ರೀತಿ ಅಭಿವೃದ್ಧಿ ಹೊಂದುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಉತ್ತಮ ಬೋಧಕ ವರ್ಗ ಮತ್ತು ತರಬೇತಿ ವಿಭಾಗ ಇದೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಪ್ರಸ್ತುತ ಶಾಲೆಯಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳು ಭಾಗ್ಯಶಾಲಿಗಳೆಂದರು.
ಜೀವನದಲ್ಲಿ ಮುಂದುವರೆಯಲು ಅತ್ಯುತ್ತಮವಾದ ದೈಹಿಕದಾರ್ಢ್ಯತೆ ಅವಶ್ಯಕ. ಇದರೊಂದಿಗೆ ಶೈಕ್ಷಣಿಕ ಸಾಧನೆ ಮೈಗೂಡಿಸಿಕೊಳ್ಳಬೇಕು. ಸ್ವಯಂ ಅಧ್ಯಯನ, ಶಿಸ್ತು, ಸಂಯಮ ಮತ್ತು ಅವಕಾಶಗಳ ಸದುಪಯೋಗ ಪಡೆದುಕೊಂಡು ಸೇನೆಯಲ್ಲಿ ಅಧಿಕಾರಿಗಳಾಗಿ ಸೇರ್ಪಡೆ ಗೊಳ್ಳಬೇಕೆಂದರು.
ಶಾಲಾವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಾಂಜಲಿ ಸಲ್ಲಿಸುವುದರ ಮೂಲಕ ಗೌರವ ಸಮರ್ಪಿಸಿದರು. ತದನಂತರ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು. ಕಾವೇರಿ ಮತ್ತು ಹಾರಂಗಿ ತಂಡಗಳ ನಡುವೆ ಸೌಹಾರ್ದಯುತ ಪುಟ್ಭಾಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕಾವೇರಿ ತಂಡ ೧-೦ ಗೋಲುಗಳೊಂದಿಗೆ ಜಯಗಳಿಸಿತು. ಸೇನಾಧಿಕಾರಿ ಫುಟ್ಬಾಲ್ ಆಟಗಾರರನ್ನು ಸನ್ಮಾನಿಸಿದರು.
ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್ ಮತ್ತಿತರರು ಇದ್ದರು. ಎಸ್. ದಿವಾಕರ್ ನಿರೂಪಿಸಿದರು.