

ಕೂಡಲಸಂಗಮ: ಬಸವ ಧರ್ಮ ಪೀಠ ಶರಣ ಮೇಳ ಕಾರ್ಯಕ್ರಮದ ಮೂಲಕ ಶರಣ ಸಂಸ್ಕೃತಿ ಬಿತ್ತರಿಸುವ ಕಾರ್ಯವನ್ನು ಕಳೆದ 33 ವರ್ಷದಿಂದ ಮಾಡುತ್ತಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ಕೂಡಲಸಂಗಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 33ನೇ ಶರಣಮೇಳದ 3ನೇ ದಿನದ ಕಾರ್ಯಕ್ರಮ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವ ಧರ್ಮ ಪೀಠ ಶರಣ ಸ್ಥಳಗಳಲ್ಲಿ ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ಶರಣರ ಕ್ಷೇತ್ರಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯಮಾಡುತ್ತಿದೆ. ಬಸವಣ್ಣನವರ ತತ್ವ, ವಿಚಾರಗಳನ್ನು ಜಗತ್ತಿಗೆ ಪಸರಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.
ಬೆಂಗಳೂರಿನ ಯೋಗಗುರು ಚನ್ನಬಸವಣ್ಣ ಮಾತನಾಡಿ, ಚಹಾ, ಕಾಫಿ ಸೇವನೆ ಹಾಗೂ ಮದ್ಯಪಾನ, ಧೂಮಪಾನದಿಂದಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ತೆಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದರು.
ಬಸವನಬಾಗೇವಾಡಿ ಯರನಾಳದ ವಿರಕ್ತಮಠದ ಗುರು ಸಂಗನಬಸವ ಸ್ವಾಮೀಜಿ, ಬಸವ ಧರ್ಮ ಪೀಠದ ಉತ್ತರಾಧಿಕಾರಿ ಮಾಹಾದೇಶ್ವರ ಸ್ವಾಮೀಜಿ, ಬಸವ ಕಲ್ಯಾಣ ಅಲ್ಲಮಪ್ರಭು ಶೂನ್ಯ ಪೀಠದ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ, ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಮಾತೆ ಜ್ಞಾನೇಶ್ವರಿ, ಕೂಡಲಸಂಗಮ ಕರವೇ ಘಟಕದ ಅಧ್ಯಕ್ಷ ಮಹಾಂತೇಶ ಕುರಿ ಮುಂತಾದವರು ಇದ್ದರು. ಬಸವರಾಜ ಧನ್ನೂರ ಸ್ವಾಗತಿಸಿದರು. ದೀಲಿಪ ಬಿ. ನಿರೂಪಿಸಿದರು.
ಪ್ರಶಸ್ತಿ ಪ್ರದಾನ
ಬೆಂಗಳೂರಿನ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಎನ್. ಪಟ್ಟರುದ್ರ, ಬೀದರದ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಶಪ್ಪ ಧನ್ನೂರ ಅವರಿಗೆ ಶರಣ ಕಾಯಕ ರತ್ನ, ಬೆಂಗಳೂರಿನ ಹಿರಿಯ ನ್ಯಾಯವಾದಿ ಜೆ. ಜಯರಾಜ ಅವರಿಗೆ ಶರಣ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ ಶ್ರೀಧರ ಗೌಡರ ರಚಿಸಿದ ಶರಣೆಯ ಚರಿತೆ, ವಚನಾಮೃತ ಪುಸಕ್ತಗಳನ್ನು ಡಾ. ಬಿ.ಟಿ. ಲಲಿತಾನಾಯಕ ಬಿಡುಗಡೆ ಮಾಡಿದರು.
ಮೂರ್ತಿ ಅನಾವರಣ
ಬಸವ ಧರ್ಮ ಪೀಠದ ಶರಣ ಲೋಕದಲ್ಲಿ ಮಾತೆ ಮಹಾದೇವಿ ಅವರ ಮೂರ್ತಿ ಅನಾವರಣವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನೆರವೇರಿಸಿದರು. ಮಾಜಿ ಸಚಿವ ಎಸ್.ಆರ್. ಪಾಟೀಲ, ಶಾಸಕ ದೊಡ್ಡನಗೌಡ ಪಾಟೀಲ, ಅಮರೇಗೌಡ ಬಯ್ಯಪುರ ಮುಂತಾದವರು ಇದ್ದರು. ಇದೇ ವೇಳೆ ಮಾತೆ ಗಂಗಾದೇವಿ, ಮಾಹಾದೇಶ್ವರ ಸ್ವಾಮೀಜಿ ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ ಮಾತೆ ಮಹಾದೇವಿ ಹೆಸರಿನಲ್ಲಿ ದಾಸೋಹ ಭವನ ನಿರ್ಮಿಸುವಂತೆ ಮನವಿ ಸಲ್ಲಿಸಿದರು.
ಬಸವಾತ್ಮಜೆ ಪ್ರಶಸ್ತಿ ಪ್ರದಾನ
ಬಸವ ಧರ್ಮ ಪೀಠದ ದ್ವಿತೀಯ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಸ್ಮರಣಾರ್ಥ ರಾಷ್ಟ್ರಮಟ್ಟದ ಪ್ರಥಮ ಬಸವಾತ್ಮಜೆ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಬಿ.ಟಿ. ಲಲಿತಾನಾಯಕ ಅವರಿಗೆ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಉತ್ತರಾಧಿಕಾರಿ ಮಾಹಾದೇಶ್ವರ ಸ್ವಾಮೀಜಿ ಪ್ರದಾನ ಮಾಡಿದರು. 51 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.