ಕೊಣ್ಣೂರಿನ ವಸತಿ ನಿಲಯ ಬಂದ್!

KONNUR HOSTEL
Published on

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ೩೯ ವರ್ಷಗಳಿಂದ ನಡೆಯುತ್ತಿದ್ದ ವಸತಿ ನಿಲಯವು ಸದ್ದಿಲ್ಲದೇ ಸ್ಥಗಿತಗೊಂಡಿದ್ದು ನರಗುಂದ ಪಟ್ಟಣಕ್ಕೆ ಸ್ಥಳಾಂತರಗೊಳ್ಳುತ್ತಿದೆ.

ಇದರಿಂದ ಗ್ರಾಮೀಣ ವಿದ್ಯಾರ್ಥಿಗಳ ವಸತಿಗೆ ಸಮಸ್ಯೆ ಉಂಟಾಗಿದ್ದು ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸುವಂತಾಗಿದೆ.
೧೯೮೪ರಲ್ಲಿ ಪ್ರಾರಂಭಗೊAಡ ಕೊಣ್ಣೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇದುವರೆಗೆ ಸಾವಿರಾರು ಬಡ ವಿದ್ಯಾರ್ಥಿಗಳು ಆಶ್ರಯದ ಜತೆಗೆ ಅಕ್ಷರಭ್ಯಾಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.

ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿಲ್ಲದ ಕಾರಣ ಇದುವರೆಗೆ ಗ್ರಾಪಂ ಕಟ್ಟಡದಲ್ಲಿ ವಸತಿ ನಿಲಯವನ್ನು ನಡೆಸಲಾಗುತ್ತಿತ್ತು. ಈಗ ಕಟ್ಟಡದ ಶಿಥಿಲಾವಸ್ಥೆ, ನೆರೆ ಹಾವಳಿ, ಮಕ್ಕಳ ಸಂಖ್ಯೆಯ ಕೊರತೆ, ವಸತಿ ನಿಲಯದ ಉನ್ನತೀಕರಣದ ನೆಪವೊಡ್ಡಿ ವಸತಿ ನಿಲಯವನ್ನೇ ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಅಸಮಾಧಾನ ಮೂಡಿಸಿದೆ.

ನರಗುಂದದಲ್ಲಿ ಒಂದು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕಿಯರ ವಸತಿ ನಿಲಯ, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ತಾಲೂಕಿನ ಶಿರೋಳ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಕೊಣ್ಣೂರಿನಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸೇರಿ ಒಟ್ಟು ೬ ವಸತಿ ನಿಲಯಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿದೆ.

ಕೊಣ್ಣೂರ ವಸತಿ ನಿಲಯದ ೨೫ ವಿದ್ಯಾರ್ಥಿಗಳು ಸೇರಿ ಎಲ್ಲ ವಸತಿ ನಿಲಯಗಳಲ್ಲಿ ಪ್ರತಿ ವರ್ಷ ೪೯೫ ವಿದ್ಯಾರ್ಥಿಗಳು ಉಚಿತ ಊಟ, ವಸತಿಯೊಂದಿಗೆ ಗುಣಮಟ್ಟದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ತಾಲೂಕಿನಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಕೊಣ್ಣೂರ ಗ್ರಾಮದಲ್ಲಿ ಒಂದು ಬಾಲಕರ ಪ್ರೌಢ ಶಾಲೆ, ಒಂದು ಬಾಲಕಿಯರ ಪ್ರೌಢ ಶಾಲೆ, ೪ ಪ್ರಾಥಮಿಕ ಹಾಗೂ ಒಂದು ಪದವಿ ಪೂರ್ವ ಕಾಲೇಜ್ ಸೇರಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಪಕ್ಕದ ರಾಮದುರ್ಗ, ರೋಣ, ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿನ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದರು.

ಇದೀಗ ಈ ವಸತಿ ನಿಲಯವನ್ನು ನರಗುಂದಕ್ಕೆ ಸ್ಥಳಾಂತರಿಸಲು ಮುಂದಾಗಿರುವ ಅಧಿಕಾರಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಸತಿ ನಿಲಯದ ಪ್ರವೇಶ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಕಳೆದ ವರ್ಷ ಇಲ್ಲಿನ ವಸತಿ ನಿಲಯದಲ್ಲಿ ಪ್ರವೇಶಾತಿ ಪಡೆದಿದ್ದ ೨೦ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದೆ.

ಅಧಿಕಾರಿಗಳಿಗಿಲ್ಲ ಜಾಗದ ಮಾಹಿತಿ

ಕೊಣ್ಣೂರಿನ ಬಾಲಕರ ವಸತಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಹೈಕೋರ್ಟ್ ಆದೇಶದ ಮೇರೆಗೆ ೨೦೧೦ರಲ್ಲಿ ೧೦ ಗುಂಟೆ ನಿವೇಶನವನ್ನು ಗ್ರಾಪಂ ವತಿಯಿಂದ ನೀಡಲಾಗಿದೆ. ಆದರೆ, ಈ ನಿವೇಶನ ಎಲ್ಲಿದೆ ಎಂಬುವುದರ ಬಗ್ಗೆ ಈಗಿನ ಯಾವೊಬ್ಬ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಅಕ್ಕಪಕ್ಕದ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಪ್ರೌಢ ಶಾಲೆಗಳಿರುವ ಹಿನ್ನೆಲೆಯಲ್ಲಿ ಇಲ್ಲಿನ ವಸತಿ ನಿಲಯಕ್ಕೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಹೀಗಾಗಿ ಇಲ್ಲಿನ ಮೆಟ್ರಿಕ್ ಪೂರ್ವ ವಸತಿ ನಿಲಯವನ್ನು ಮಂಜೂರಾದ ಹುದ್ದೆ, ಸಿಬ್ಬಂದಿ ಸಹಿತ ನರಗುಂದ ಪಟ್ಟಣಕ್ಕೆ ಸ್ಥಳಾಂತರಿಸಿ ೧೦೦ ವಿದ್ಯಾರ್ಥಿಗಳ ಸಂಖ್ಯಾ ಬಲದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನಾಗಿ ಪರಿವರ್ತಿಸಲು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಅವರು ೨೦೨೧ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರಿಂದ ಈಗ ವಸತಿ ನಿಲಯದ ಪ್ರವೇಶಾತಿ ಸಂಪೂರ್ಣ ಬಂದ್ ಆಗಿದೆ.

ನರಗುಂದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿಯಾಗಿ ನೇಮಕಗೊಂಡು ಕೇವಲ ಎಂಟು ದಿನಗಳಾಗಿವೆ. ಹಿಂದೆ ಏನು ನಡೆದಿದೆ ಎಂಬುದರ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ಅವರ ಅಂತಿಮ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ.| ರವೀಂದ್ರ ಬಾನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ.

ಕೊಣ್ಣೂರಿನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ಉನ್ನತೀಕರಿಸಿದ ವಸತಿ ನಿಲಯವನ್ನಾಗಿ ನರಗುಂದಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ಇಲ್ಲಿನ ೨೦ ಮಕ್ಕಳಿಗೆ ಸಮಸ್ಯೆ ಎದುರಾಗಿದೆ. ಹಾಸ್ಟೆಲ್ ಬಂದ್ ಆಗಿದ್ದರಿಂದ ಅಧಿಕಾರಿಗಳು ಪಕ್ಕದ ಶಿರೋಳ ಅಥವಾ ನರಗುಂದ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದುಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಕೊಣ್ಣೂರ ಬಿಟ್ಟು ಬೇರೆ ಕಡೆಗೆ ಪ್ರವೇಶ ಪಡೆದರೆ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚುವರಿ ಪ್ರಯಾಣ ಮಾಡಬೇಕಾಗುತ್ತದೆ.| ಭೀಮಪ್ಪ ಹೊರಕೇರಿ, ಕೊಣ್ಣೂರ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net