

ನರಗುಂದ: ಅವ್ಯವಸ್ಥೆಯ ಆಗರವಾಗಿರುವ ತಾಲೂಕಿನ ಕೊಣ್ಣೂರ ಬಸ್‌ನಿಲ್ದಾಣದಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಸ್‌ನಿಲ್ದಾಣದಲ್ಲಿ ಸರಿಯಾದ ಪ್ಲಾಟ್‌ಫಾರ್ಮ್‌ಗಳಿಲ್ಲ. ಎಲ್ಲೆಂದರಲ್ಲಿ ಬಸ್‌ನಿಲುಗಡೆಯಾಗುತ್ತವೆ. ಬಸ್ ನಿಲುಗಡೆ ಬಹಳ ಸಮಯದವರೆಗೂ ಆಗುವುದಿಲ್ಲ. ಇನ್ನೂ ಪ್ರಯಾಣಿಕರು ಬಸ್ ಹತ್ತುತಿರುವಾಗಲೇ ಬಸ್ ಚಲಾಯಿಸುವ ಚಾಲಕರ ನಿರ್ಲಕ್ಷೃಕ್ಕೆ ಕೊನೆ ಇಲ್ಲದಂತಾಗಿದೆ. ಇಲ್ಲಿನ ವಿಶ್ರಾಂತಿ ಕೊಠಿಡಿಗೆ ಬೀಗ ಹಾಕಿ ಅನೇಕ ವರ್ಷಗಳೇ ಕಳೆದರೂ ಸಂಬಂಧಪಟ್ಟ ಯಾರೊಬ್ಬರೂ ಗಮನಹರಿಸಿಲ್ಲ.
ಕಳೆದ ವರ್ಷ ವಿದ್ಯಾರ್ಥಿಯೊಬ್ಬರು ಬಸ್ ಹತ್ತುವಾಗ ಕೆಳಗೆಬಿದ್ದು ಬಸ್ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾನೆ. ಆದರೂ ಚಾಲಕರು ಸಮರ್ಪವಾಗಿ ಬಸ್ ನಿಲ್ಲಿಸುವುದಿಲ್ಲ ಎನ್ನುವ ಆರೋಪಗಳು ಸಾಮಾನ್ಯ ಎನ್ನುವಂತಾಗಿವೆ. ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ,
ನಿಲ್ದಾಣದಲ್ಲಿರುವ ಹೋಟೆಲ್ ಆರಂಭವಾಗಿಲ್ಲ. ನಿಲ್ದಾಣದ ಅವರಣದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ನಿಲ್ದಾಣದಲ್ಲಿ ಅಳವಡಿಸಲಾಗಿಲ್ಲ. ಬಸ್ ನಿಲ್ದಾಣ ಆವರಣದ ಹೊರಗಡೆ ಬದಿಯಲ್ಲಿರುವ ಅಂಗಡಿಗಳ ವ್ಯಾಪಾರಸ್ಥರು ಕಸವನ್ನು ತಂದು ಬಸ್ ನಿಲ್ದಾಣ ಆವರಣದಲ್ಲಿಯೇ ತಂದು ಎಸೆಯುತ್ತಾರೆ.
ಎರಡು ತಿಂಗಳ ಹಿಂದೆ ಗ್ಯಾರಂಟಿ ಸಮಿತಿ ಸದಸ್ಯರು ನಿಲ್ದಾಣಕ್ಕೆ ತೆರಳಿ ಅಲ್ಲಿಯ ಅವವ್ಯವಸ್ಥೆಯನ್ನು ನೋಡಿ ವಾಕರಸಾ ಸಂಸ್ಥೆಯವರನ್ನ ಸ್ಥಳಕ್ಕೆ ಕರೆಯಿಸಿ ಕೆಲ ಮೂಲ ಸೌಲಭ್ಯಗಳನ್ನು ಸರಿಪಡಿಸಿದ್ದರು. ಆದರೆ, ಈಗ ಮತ್ತೆ ಸಮಸ್ಯೆಗಳ ಆಗರವಾಗಿದೆ.
ಸಮಸ್ಯೆ ಪರಿಹರಿಸುವಂತೆ ವಾಕರಾರಸಾ ಸಂಸ್ಥೆ ಅಧಿಕಾರಿಗಳಿಗೆ ಮತ್ತು ಡಿಪೋ ವ್ಯವಸ್ಥಾಪಕರಿಗೆ ತಿಳಿಸಿದರೂ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸುರೇಶ ಮ್ಯಾಗೇರಿ. ಅನಂತ ಗೊಜನೂರ, ರಾಮಪ್ಪ ಹರಸಿಂಪಿ, ಲೋಕಪ್ಪ ಜಂಗವಾಡ ತಿಳಿಸಿದ್ದಾರೆ.