ಹನುಮಾನ್ ಮಹಾರಾಜ್‌ಕಿ ಜೈ

26-12-wadi 01
ಕೊಂಚೂರಿನ ಶ್ರೀ ಹನುಮಾನ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತ ಜೈಘೋಷದ ಮಧ್ಯೆ ಸಂಭ್ರಮದಿಂದ ರಥೋತ್ಸವ ಜರುಗಿತು.
Published on

ವಾಡಿ: ಕೊಂಚೂರು ಗ್ರಾಮದಲ್ಲಿ ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ಶ್ರೀ ಹನುಮಾನ ದೇವರ ರಥೋತ್ಸವ ಮಂಗಳವಾರ ಸಂಜೆ ಜರುಗಿತು.

ಬೆಳಗ್ಗೆ ಶ್ರೀ ಹನುಮಂತ ದೇವರಿಗೆ ವಿಶೇಷ ಅರ್ಚನೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ದೇವಸ್ಥಾನ ಆವರಣದಲ್ಲಿ ಸಂಭ್ರಮದ ಪಲ್ಲಕ್ಕಿ ಉತ್ಸವ ನೆರವೇರಿತು. ಬಳಿಕ ಗ್ರಾಮದ ಭಕ್ತರು ನೈವೇದ್ಯ ಸಮರ್ಪಿಸಿದರು. ಮಧ್ಯಾಹ್ನ ಮುಖಂಡರ ಮನೆಯಿಂದ ದೇವಸ್ಥಾನದವರೆಗೆ ನಂದಿಕೋಲು, ಕುಂಭದ ಮೆರವಣಿಗೆ ನಡೆಯಿತು.

ಸಂಜೆ ಅರ್ಚಕರು ಹಾಗೂ ದೇವಸ್ಥಾನದ ಪ್ರಮುಖರು ಭವ್ಯ ರಥೋತ್ಸವಕ್ಕೆ ಚಾಲನೆ ನೀಡಿದರು. ಅಸಂಖ್ಯಾತ ಭಕ್ತರು ಶ್ರದ್ಧಾ, ಭಕ್ತಿಯಿಂದ ರಥವನೇಳೆದರು. ಶ್ರೀ ಹನುಮಾನ್‌ಕಿ ಜೈ.. ಜೈ ಶ್ರೀರಾಮ್.. ಜೈ.. ಜೈ.. ಹನುಮಾನ್ ಸೇರಿ ವಿವಿಧ ಘೋಷಗಳು ಮೊಳಗಿದವು. ಜನರು ರಥಕ್ಕೆ ಉತ್ತತ್ತಿ, ಬಾರೆ ಕಾಯಿ, ಬಾಳೆ ಹಣ್ಣು ಹಾಗೂ ನಾಣ್ಯ ಎಸೆದು ಹರಕೆ ತೀರಿಸಿದರು.

ಗ್ರಾಮ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಅಪಾರ ಜನರು ಸರದಿ ಸಾಲಿನಲ್ಲಿ ನಿಂತು ಹನುಮಂತ ದೇವರ ದರ್ಶನ ಪಡೆದರು. ಮಕ್ಕಳ ಆಟಿಕೆ, ಮಹಿಳೆಯರಿಗಾಗಿ ಬೃಹತ್ ತೊಟ್ಟಿಲು, ಸ್ಪೇಷಲ್ ಜಿಲೇಬಿ, ಮಿರ್ಚಿ ಭಜ್ಜಿ, ಫಳಹಾರ್ ಅಂಗಡಿಗಳು ಜಾತ್ರೆಯ ಆಕರ್ಷಣೆಯಾಗಿದ್ದವು.

ಬಳವಡಗಿಯಲ್ಲಿ ಯಲ್ಲಾಂಬಿಕಾ ದೇವಿಗೆ ನಮನ: ಬಳವಡಗಿ ಗ್ರಾಮದಲ್ಲಿ ಶ್ರೀ ಯಲ್ಲಾಂಬಿಕಾ ದೇವಿ ಜಾತ್ರೋತ್ಸವ ಮಂಗಳವಾರ ಸಂಭ್ರಮದಿAದ ನಡೆಯಿತು. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಶಕ್ತಿ ಕೇಂದ್ರವಾಗಿದ್ದು, ರಾಜ್ಯ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ ದೇವಿಗೆ ಕುಂಕುಮಾರ್ಚನೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಭಕ್ತರು ತಾಯಿಗೆ ಉಡಿ ತುಂಬಿ ಹರಕೆ ತೀರಿಸಿದರು. ಅಲ್ಲದೆ ಜೋಳದ ಕಡಬು, ಪುಂಡಿಪಲ್ಲೆ, ಸಜ್ಜಕ, ಬೇಳೆ ಹೋಳಿಗೆ ಸೇರಿ ಇನ್ನಿತರ ಖಾದ್ಯವನ್ನು ನೈವೇದ್ಯವನ್ನಾಗಿ ಸಮರ್ಪಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ಕುಟುಂಬದವರಿಗೆ ಕುಳಿತು ಭೋಜನ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net