

ವಿಜಯವಾಣಿ ಸುದ್ದಿಜಾಲ ಉಡುಪಿ
ಕೊಂಕಣಿ ಭಾಷಿಗರೆಲ್ಲ ತಮ್ಮ ಮನೆಗಳಲ್ಲಿ ಕೊಂಕಣಿಯಲ್ಲೇ ಮಾತನಾಡುವ ಮೂಲಕ ಈ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಸಮೃದ್ಧವಾಗಿ ಬೆಳೆಸಲು ಸಾಧ್ಯವಿದೆ. ಹೀಗಾಗಿ ಯುವಜನತೆ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತಾಗಿ ಸದಾ ಪ್ರೀತಿ ಹೊಂದಿರಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಶೋಕಮಾತಾ ಚರ್ಚ್ನ ಆವೆ ಮರಿಯ ಸಭಾಂಗಣದಲ್ಲಿ ಕೊಂಕಣಿ ಸಾಹಿತ್ಯ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ ಉಡುಪಿ ಜಿಲ್ಲೆ, ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿವಸದ ನಿಮಿತ್ತ ಆಗಸ್ಟ್ 31ರಂದು ಆಯೋಜಿಸಿದ್ದ ಕೊಂಕಣಿ ಯುವ ಸಂಭ್ರಮ ಕನಾಪ-2025' (ಕವಿತಾ, ನಾಚ್, ಪದ್ಯ ಸ್ಪರ್ಧೆ)ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರಿನ ದಾಯ್ಜಿವರ್ಲ್ಡ್ ಮೀಡಿಯಾ ಪೆ.ಲಿಮಿಟೆಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವುದರಿಂದ ಯುವಜನರಿಗೆ ಉತ್ತಮ ನಾಯಕನಾಗಿ ಬೆಳೆಯಲು ಅವಕಾಶ ಲಭಿಸುತ್ತದೆ. ಹೀಗಾಗಿ ಪ್ರತಿಭೆಗಳೊಂದಿಗೆ ಉತ್ತಮ ಗುರಿ ಮತ್ತು ಉದ್ದೇಶ ಹೊಂದಿರಬೇಕು ಎಂದರು.
ಉಡುಪಿ ಜಿಲ್ಲಾ ಕೊಂಕಣಿ ಸಾಹಿತ್ಯ ಕಲೆ ಹಾಗೂ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಡಾ. ಫ್ಲಾವಿಯಾ ಕ್ಯಾಸ್ಟಲಿನೊ, ಕಾರ್ಯದರ್ಶಿ ರಿತೇಶ್ ಡಿಸೋಜಾ, ಕೋಶಾಧಿಕಾರಿ ಆಲ್ಫೋನ್ಸ್ ಡಿಕೋಸ್ತಾ, ಸ್ಥಾಪಕಾಧ್ಯಕ್ಷ ಡಾ. ಜೆರಾಲ್ಡ್ ಪಿಂಟೊ, ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ವಂ.ಸ್ಟೀವನ್ ಫೆರ್ನಾಂಡಿಸ್, ಭಾರತೀಯ ಕಥೊಲಿಕ್ ಯುವ ಸಂಚಾಲನದ ಅಧ್ಯಕ್ಷ ನಿತಿನ್ ಬಾರೆಟ್ಟೊ, ವೈಸಿಎಸ್ ಅಧ್ಯಕ್ಷ ರಿಯಾನ್ ಟೆಲ್ಲಿಸ್ ಉಪಸ್ಥಿತರಿದ್ದರು.
ಕೊಂಕಣಿ ಭಾಷೆಯಲ್ಲಿ ವಿಶೇಷ ಸಾಧನೆ ಮಾಡಿರುವ ಉಡುಪಿ ಶೋಕಮಾತಾ ದೇವಾಲಯದ ರೀವನ್ ಡಾಯಸ್ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ವಿಶ್ವ ಕೊಂಕಣಿ ಕಲಾರತ್ನ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಝಾರಿಯೊ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಮೆಕ್ಲಿನ್, ಲಿಶಾ ಸ್ವಾಗತಿಸಿದರು. ಜೋಸ್ವಿನ್ ಆರಾನ್ಹಾ, ಎಡ್ರೋಯ್ ನಝರೆತ್ ಕಾರ್ಯಕ್ರಮ ನಿರೂಪಿಸಿದರು. ವೆನಿಸಾ , ಜೊಯ್ಸ್ ವಂದಿಸಿದರು.
ಭಾರತದಲ್ಲಿ ಮಾನ್ಯತೆ ಪಡೆದ ಅಧಿಕೃತ 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. 1992ರ ಆ.20ರಂದು ಭಾಷೆಗೆ ಮಾನ್ಯತೆ ಲಭಿಸಿದ್ದು, ನಾವು ಕೊಂಕಣಿ ಮಾನ್ಯತಾ ದಿವಸ ಹೆಸರಲ್ಲಿ ಸಂಭ್ರಮಿಸುತ್ತೇವೆ. ಯುವಜನರಿಗೆ ಇದು ಸ್ಫೂರ್ತಿಯಾಗಲಿ. ಈ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಕೈಜೋಡಿಸೋಣ. | ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್. ಉಡುಪಿ ಧರ್ಮಪ್ರಾಂತ್ಯದ ಗುರು.