

ಮಂಗಳೂರು : ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಸೇವೆಯಲ್ಲಿ ತೊಡಗಿರುವ ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ದಮಯಂತಿ ಪುನಃ ಸ್ವಯಂವರ ಕೊಂಕಣಿ ಯಕ್ಷಗಾನ ಪ್ರದರ್ಶನ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ, ಉದ್ಯಮಿ ಶ್ರದ್ಧಾ ಸುಬ್ರಾಯ ಪೈ, ಟಾಟಾ ಸಂಸ್ಥೆಯ ನಿವೃತ್ತ ಎಂಡಿ ಸಿ.ಡಿ.ಕಾಮತ್ ದೀಪ ಪ್ರಜ್ವಲನೆಗೊಳಿಸಿದರು.
ವಿಶ್ವದಲ್ಲಿ 40 ಲಕ್ಷ ಕೊಂಕಣಿ ಭಾಷಿಗರಿದ್ದಾರೆ. ಕೊಂಕಣಿ ಭಾಷೆಯ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಪ್ರೇಕ್ಷಕ ವರ್ಗ
ಕಡಿಮೆಯಾಗಿದೆ. ಎಲ್ಲರೂ ಕೊಂಕಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾಷೆಯನ್ನು ಪ್ರೋತ್ಸಾಹಿಸಬೇಕೆಂದು ನಂದಗೋಪಾಲ ಶೆಣೈ ಹೇಳಿದರು
ಯಕ್ಷಗಾನ ನಿದೇರ್ಶಕ ಎಂ.ಶಾಂತಾರಾಮ ಕುಡ ಅವರಿಗೆ ಸಾಂಸ್ಕೃತಿಕ ಯಕ್ಷ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಚಾಲಕ ಕೃಷ್ಣ ಕಾಮತ್, ಕಾರ್ಯದರ್ಶಿ ಸುವರ್ಣಿ ಪಡಿಯಾರ್, ಖಜಾಂಚಿ ರಾಧಿಕಾ ಪೈ ಉಪಸ್ಥಿತರಿದ್ದರು. ಅಧ್ಯಕ್ಷೆ ಪ್ರಭಾ ಭಟ್ ಸ್ವಾಗತಿಸಿದರು.