20, 21ಕ್ಕೆ ಮಣಿಪಾಲದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನ

Books
Published on

ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಸಮಾನ ಮನಸ್ಕರ ಸಂಘಟನಾ ಸಮಿತಿ ಸಹಯೋಗದಲ್ಲಿ ಮಾ.20 ಮತ್ತು 21ರಂದು ಕೊಂಕಣಿ ಸಾಹಿತ್ಯ ಸಮ್ಮೇಳನ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ನಡೆಯಲಿದೆ.

20ರಂದು ಅಪರಾಹ್ನ 3 ಗಂಟೆಗೆ ಸಿಂಡಿಕೇಟ್ ಸರ್ಕಲ್‌ನಿಂದ ಸಭಾಭವನದವರೆಗೆ ನಡೆಯುವ ಕೊಂಕಣಿ ಶೋಭಾಯಾತ್ರೆಗೆ ಭಾರತೀಯ ವಿಕಾಸ ಟ್ರಸ್ಟ್ ಟ್ರಸ್ಟಿ ಟಿ. ಅಶೋಕ್ ಪೈ ಚಾಲನೆ ನೀಡಲಿದ್ದಾರೆ. ಸಾಯಂಕಾಲ 6ಕ್ಕೆ ಸಭಾ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಲಿದ್ದಾರೆ. ಶಾಸಕ ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಿ. ಜಗದೀಶ್ ಭಾಗವಹಿಸಲಿದ್ದಾರೆ ಎಂದು ಪ್ರಚಾರ ಸಮಿತಿ ಸಂಚಾಲಕ ಗಣೇಶ್ ಪ್ರಸಾದ್ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತನಾಗ್ ಸಹಿತ ಹಲವು ಸಾಧಕರನ್ನು ಸನ್ಮಾನಿಸಲಾಗುವುದು. ವಿವಿಧ ಕವಿಗೋಷ್ಠಿ, ಕಥಾಗೋಷ್ಠಿ, ಸಂಗೀತಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಭಾರತದ ಪ್ರಮುಖ 3 ಧರ್ಮಗಳ ಅನುಯಾಯಿಗಳಲ್ಲಿ ಕೆಲವು ಪಂಗಡವರು ಮಾತೃಭಾಷೆಯಾಗಿ ಮಾತನಾಡುವ ಏಕೈಕ ಭಾಷೆ ಕೊಂಕಣಿಯಾಗಿದೆ ಎಂದರು.

ಸಂಘಟನಾ ಸಮಿತಿ: ಸಮ್ಮೇಳನದ ಅಂಗವಾಗಿ ಸಂಘಟನಾ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಅಧ್ಯಕ್ಷರಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ, ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಮೃತ್ ಶೆಣೈ, ಪ್ರಧಾನ ಸಂಚಾಲಕರಾಗಿ ಪೂರ್ಣಿಮಾ ಸುರೇಶ್, ಗೌರವ ಸಲಹೆಗಾರರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಗೀತಾ ಶೇಟ್, ರಾಘವೇಂದ್ರ ಕರ್ವಾಲು, ವಸಂತ ನಾಯಕ್, ಜೋಸೆಫ್ ರೆಬೆಲ್ಲೊ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net