ಕೊಂಕಣಿ ಸಾಹಿತ್ಯ ಅಕಾಡೆಮಿ ರಜತ ಮಹೋತ್ಸವ

Konkani Academy
Published on

ಕಾರ್ಕಳ: ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಅಪಾಯ ಸ್ಥಿತಿಯಲ್ಲಿವೆ. ಮೂರು ಸಹಸ್ರಕ್ಕೂ ಮಿಕ್ಕಿ ಭಾಷೆಗಳಿದ್ದರೂ, 1200 ಭಾಷೆಗಳಷ್ಟೇ ಅಸ್ತಿತ್ವ ಉಳಿಸಿಕೊಂಡಿವೆ. ಇಂಗ್ಲಿಷ್‌ನಿಂದಾಗಿ ಪ್ರಾದೇಶಿಕ ಭಾಷೆಗಳು ಸೊರಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದರು.ಕಾರ್ಕಳ ಎಸ್‌ವಿಟಿ ವಿದ್ಯಾಸಂಸ್ಥೆ ವಠಾರದಲ್ಲಿ ಶನಿವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ಕೆಲವು ಪ್ರಾದೇಶಿಕ ಭಾಷೆಗಳು ಲಿಪಿ ಇಲ್ಲದಿದ್ದರೂ, ತಮ್ಮ ಸಹೋದರ ಭಾಷೆಗಳೊಂದಿಗೆ ಬೆರೆತು ತಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡಿದೆ. ಪ್ರಾದೇಶಿಕ ಭಾಷೆಗಳು ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತಿದೆ. ಕೊಂಕಣಿಯನ್ನು ಬೆಳೆಸಲು ಕನ್ನಡ ಹಾಗೂ ಇತರ ಭಾಷೆಗಳು ಸಹಕರಿಸುತ್ತಾ ಬಂದಿದೆ. ಆದರೆ ಇಂಗ್ಲಿಷ್ ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುತ್ತಿದೆ ಎಂದರು.

ಅತ್ತೂರು ಬಸಿಲಕಾ ಧರ್ಮಗುರು ಜಾರ್ಜ್ ಡಿಸೋಜ ಆಶೀರ್ವಚನ ನೀಡಿ, ಕೊಂಕಣಿ ನಮ್ಮ ಭಾಷೆ, ನಮ್ಮ ಸಂಸ್ಕೃತಿ. ಅದರ ಉಳಿವು ನಮ್ಮಿಂದಲ್ಲೇ ಆಗಬೇಕು ಎಂದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿ.ಸುನೀಲ್ ಕುಮಾರ್, ಬೆಳ್ಳಿ ಹಬ್ಬ ಸಮಿತಿ ಗೌರವಾಧ್ಯಕ್ಷೆ ಸಂಧ್ಯಾ ಪೈ, ಮಂಗಳೂರು ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕುಮಾರ ಬಾಬು ಬೆಕ್ಕೇರಿ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಾಮತ್, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು. ಯೋಗೀಶ್ ಕಿಣಿ ನಾಡಗೀತೆ ಹಾಡಿದರು. ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಸ್ವಾಗತಿಸಿದರು. ಕೆ.ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಹಬ್ಬದ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶೆಣೈ ವಂದಿಸಿದರು. 25 ಸಾಧಕರನ್ನು ಸನ್ಮಾನಿಸಲಾಯಿತು.

ಕೊಂಕಣಿ ನಶಿಸುವ ಭಾಷೆಯಲ್ಲ: ಕೊಂಕಣಿ ಭಾಷೆ ನಶಿಸುವ ಭಾಷೆ ಅಲ್ಲ ಎಂದು ಸಮ್ಮೇಳನಾಧ್ಯಕ್ಷ, ಗೋಕುಲದಾಸ ಪ್ರಭು ಅಭಿಪ್ರಾಯಪಟ್ಟರು. ಪ್ರದೇಶಕ್ಕೆ ಅನುಗುಣವಾಗಿ ಭಾಷೆಯ ಭಿನ್ನತೆ ಕಂಡುಬಂದರೂ, ಕೊಂಕಣಿ ಭಾಷೆಕರೆಲ್ಲರೂ ಒಂದೇ. ಕೊಂಕಣಿ ಮೂಲಕ ಸಂಸ್ಕೃತಿ, ಕಲೆ, ಸಂಸ್ಕಾರ ಬೆಳೆಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net