ಕೊಂಕಣಿ ಅಕಾಡೆಮಿಯಿಂದ ಸಾಹಿತಿಗಳಿಗೆ ಪ್ರೋತ್ಸಾಹ : ಜೋಕಿಂ ಸ್ಟ್ಯಾನಿ ಆಲ್ವಾರಿಸ್

mng-20oct-konkani
Published on


ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಎಂ.ಸಿ.ಸಿ. ಬ್ಯಾಂಕ್ ಸಹಯೋಗದಲ್ಲಿ ಸಾಹಿತ್ಯ ಭಂಡಾರ ಕಾರ್ಯಕ್ರಮ ನಗರದ ಹಂಪನಕಟ್ಟೆಯ ಎಂ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ಕೊಂಕಣಿ ಸಾಹಿತಿಗಳು ಬರೆದ ಕೊಂಕಣಿಯ 9 ಪುಸ್ತಕಗಳು ಬಿಡುಗಡೆ ನೆರವೇರಿತು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ ‘ಕೊಂಕಣಿಯಲ್ಲಿ ವಿವಿಧತೆಯನ್ನು ಕಾಪಾಡಲು ಹಾಗೂ ಕೊಂಕಣಿಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಅಕಾಡೆಮಿಯು ನಿರಂತರವಾಗಿ ಕೆಲಸ ಮಾಡುತ್ತಿದೆ. ಸೂಕ್ತ ಪುಸ್ತಕಗಳನ್ನು ಆಯ್ದು ಪ್ರಕಟಿಸುವ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ವಲೇರಿಯನ್ ರಾಡ್ರಿಗಸ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿಗಳ ಜ್ಯೋ ಲೋಬೊ ಅವರು
ಅನಿಸಿಕೆ ಹಂಚಿಕೊಂಡರು. ಲಿಲ್ಲಿ ಮಿರಾಂದಾ ಅವರು ಕನ್ನಡದಿಂದ ಕೊಂಕಣಿಗೆ ಅನುವಾದಿಸಿದ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ ಕೃತಿಯ ಇ-ಬುಕ್ ಆವೃತ್ತಿಯನ್ನು ವಾಲ್ಟರ್ ನಂದಳಿಕೆ ಬಿಡುಗಡೆಗೊಳಿಸಿದರು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ಮಾಹಿತಿ ಆಯೋಗದ ಆಯುಕ್ತರಾಗಿ ನೇಮಕಗೊಂಡ ವಿನ್ಸೆಂಟ್ ರಿಚರ್ಡ್ ಡಿಸೋಜ ಅವರನ್ನು ಗೌರವಿಸಲಾಯಿತು.
ಕೊಂಕಣಿ ಅಕಾಡೆಮಿಯು ಹಮ್ಮಿಕೊಂಡ ಕಾದಂಬರಿ ಹಾಗೂ ಕಿರು ನಾಟಕಗಳನ್ನು ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ದಯಾನಂದ ಮಡ್ಕೇಕರ್, ಸುನಿಲ್ ಸಿದ್ದಿ, ಸಪ್ನಾ ಮೇ ಕ್ರಾಸ್ತಾ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ನವೀನ್ ಲೋಬೊ ವಂದಿಸಿದರು. ಕ್ರಿಸ್ಟೋಫರ್ ಅನಿಲ್
ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net