

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರ್ನಾಟಕ ಕರಾವಳಿ ರೈಲ್ವೆ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಕೊಂಕಣ ರೈಲ್ವೆಯಲ್ಲಿರುವ ಕರ್ನಾಟಕ ಸರ್ಕಾರದ ಶೇರು ವಾಪಸು ಪಡೆಯುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ದಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಸುರತ್ಕಲ್ ಹಾಗೂ ಮೂಲ್ಕಿ ರೈಲು ನಿಲ್ದಾಣಗಳಲ್ಲಿ ಎರಡೂ ಕಡೆ ಫ್ಲಾಟ್‌ಫಾರ್ಮ್ ನೆಲ ಹಾಗೂ ಸೂರು ನಿರ್ಮಿಸುವ ಒಟ್ಟು 3.63 ಕೋಟಿ ರೂ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೊಂಕಣ ರೈಲ್ವೆ ಜಾರ್ಜ್ ಫೆನಾಂಡಿಸ್ ಅವರ ಕನಸಿನ ಕೂಸು. ಮೂಲಭೂತ ಸೌಕರ್ಯಗಳು ಇಲ್ಲದ ಅಂದಿನ ಕಾಲದಲ್ಲಿ, ಅತ್ಯಂತ ಕ್ಲಿಷ್ಟಕರ ಭೌಗೋಳಿಕ ಪರಿಸ್ಥಿತಿಯಲ್ಲಿ ಈ ಐತಿಹಾಸಿಕ ರೈಲುಹಳಿ ನಿರ್ಮಾಣಗೊಂಡಿದೆ. ಆದರೆ ನಂತರದ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಕೊಂಕಣ ರೈಲ್ವೆ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಹಳಿ ದ್ವಿಗುಣ ನಡೆದಿಲ್ಲ. ಭವಿಷ್ಯದಲ್ಲಿ ರೈಲು
ಹಳಿ ಡಬ್ಲಿಂಗ್‌ಗೂ ಸಾಧ್ಯವಾಗುವಂತೆ ಆಗಲೇ ಸ್ಥಳಾವಕಾಶ ಮಾಡಿರುವದನ್ನು ಕೊಂಕಣ ಹಳಿ ನಿರ್ಮಿಸಿದ ಇಂಜಿನಿಯರ್ ಶ್ರೀಧರನ್ ಪಿಳ್ಳೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕು ಎಂದು ಕರಾವಳಿ ಕರ್ನಾಟಕದ ಸಂಸದರು ಮಾಡಿಕೊಂಡ ಮನವಿಗೆ ಕೇಂದ್ರ ರೈಲ್ವೆ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ಹೇಳಿದರು.
ವಿಲೀನ ಪ್ರಕ್ರಿಯೆಗೆ ಕೊಂಕಣ ರೈಲ್ವೆಯಲ್ಲಿ ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ಕರ್ನಾಟಕ ಸರ್ಕಾರದ ಶೇರುಗಳಿದ್ದು, ಆ ರಾಜ್ಯಗಳು ತಮ್ಮ ಶೇರುಗಳನ್ನು ವಾಪಾಸು ಪಡೆಯಬೇಕಾಗಿವೆ ಎಂದು ಅವರು ಮಾಹಿತಿ ನೀಡಿದರು.
ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಮಾತನಾಡಿ, ಕೊಂಕಣ ರೈಲ್ವೆಯಲ್ಲಿ ಮೊದಲು ಎದುರಾಗುವ ಸುರತ್ಕಲ್ ನಿಲ್ದಾಣ ಅಭಿವೃದ್ಧಿಯಿಂದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ನಿಲ್ದಾಣಗಳ ಮೇಲೆ ಈಗ ಇರುವ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ಸುರತ್ಕಲ್ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅನುದಾನದ ಅವಶ್ಯಕತೆ ಇದೆ. ಸುರತ್ಕಲ್ ರೈಲು ನಿಲ್ದಾಣದ ಅಭಿವೃದ್ಧಿಗೆ ಇನ್ನಷ್ಟು ಅನುದಾನದ ಅವಶ್ಯಕತೆ ಇದೆ ಎಂದರು.
ಕೊಂಕಣ ರೈಲ್ವೆ ಕಾರವಾರ ಪ್ರಾದೇಶಿಕ ವಿಭಾಗದ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಮಾತನಾಡಿ, ಸುರತ್ಕಲ್ ರೈಲು ನಿಲ್ದಾಣದಲ್ಲಿ ಫ್ಲ್ಯಾಟ್‌ಫಾರಂಗೆ 56.07 ಲಕ್ಷ ರೂ., ಶೆಲ್ಟರ್‌ಗೆ 119.19 ಲಕ್ಷ ರು., ಮೂಲ್ಕಿಯಲ್ಲಿ ಫ್ಲ್ಯಾಟ್‌ಫಾರಂಗೆ 45.54 ಲಕ್ಷ ರೂ., ಶೆಲ್ಟರ್‌ಗೆ 123.35 ಲಕ್ಷ ರೂ. ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿಗೆ 18.95 ಲಕ್ಷ ರೂ. ವೆಚ್ಚವಾಗಲಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸುವ ವಿಶ್ವಾಸ ಇದೆ ಎಂದರು.
ಪಾಲಿಕೆ ಸದಸ್ಯರಾದ ಸರಿತಾ ಶಶಿಧರ್, ಸುಮಿತ್ರಾ ಕರಿಯ, ಕಾರವಾರ ವಿಭಾಗದ ಡೆಪ್ಯೂಟಿ ಚೀಫ್ ಇಂಜಿನಿಯರ್ ವಿಜಯ್ ಕುಮಾರ್, ಕೊಂಕಣ್ ರೈಲ್ವೆ ಹಿರಿಯ ಪ್ರಾದೇಶಿಕ ಸಂಚಾರಿ ವ್ಯವಸ್ಥಾಪಕ ದಿಲೀಪ್ ಡಿ.ಭಟ್, ಹಿರಿಯ ಇಂಜಿನಿಯರ್ ಗೋಪಾಲಕೃಷ್ಣನ್, ಡೆಪ್ಯೂಟಿ ಚೀಫ್ ಮೆಡಿಕಲ್ ಆಫೀಸರ್ ಡಾ.ಸ್ಟೀವನ್ ಜಾರ್ಜ್, ಹಿರಿಯ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಷನ್ಸ್ ಇಂಜಿನಿಯರ್ ಸುದರ್ಶನ್ ರೆಡ್ಡಿ, ಎಟಿಎಂ ಜಿ.ಡಿ.ಮೀನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
---------
ಸುರತ್ಕಲ್ ರೈಲು ನಿಲ್ದಾಣದಲ್ಲಿ ಫ್ಲಾಟ್‌ಫಾರಂಗೆ 56.07 ಲಕ್ಷ ರೂ., ಶೆಲ್ಟರ್‌ಗೆ 119.19 ಲಕ್ಷ ರೂ., ಮೂಲ್ಕಿಯಲ್ಲಿ ಫ್ಲಾಟ್‌ಫಾರಂಗೆ 45.54 ಲಕ್ಷ ರೂ., ಶೆಲ್ಟರ್‌ಗೆ 123.35 ಲಕ್ಷ ರೂ. ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿಗೆ 18.95 ಲಕ್ಷ ರೂ. ವೆಚ್ಚವಾಗಲಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸಲಾಗುವುದು.
ಆಶಾ ಶೆಟ್ಟಿ, ವ್ಯವಸ್ಥಾಪಕಿ, ಕೊಂಕಣ ರೈಲ್ವೆ ಕಾರವಾರ ಪ್ರಾದೇಶಿಕ ವಿಭಾಗ