

ಆರ್ಡಿ: ಸೃಷ್ಟಿಯಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು. ಪುರಾತನ ಕಾಲಗಳಿಂದಲೂ ಹಿರಿಯರು ಆಚರಿಸಿಕೊಂಡು ಬಂದ ಸಂಸ್ಕಾರ, ಧಾರ್ಮಿಕ ಆಚರಣೆಗಳು ಇಂದಿಗೂ ಪಾವಿತ್ರೃ ಉಳಿಸಿಕೊಂಡು ಜನರ ಜೀವನದಲ್ಲಿ ಹೊಸ ಚೈತನ್ಯದೊಂದಿಗೆ ಬದಲಾವಣೆಗೆ ಪ್ರೇರಣೆ ನೀಡುತ್ತಿವೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.
ಆರ್ಡಿ ಸಮೀಪದ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಆಯೋಜಿಸಲಾದ ನವರಾತ್ರಿ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ತೊನ್ನಾಸೆ, ಜೀರ್ಣೋದ್ಧಾರ ಸಮಿತಿ ಮಾಜಿ ಗೌರಾವಾಧ್ಯಕ್ಷ ಟಿ.ಪ್ರಶಾಂತ ಶೆಟ್ಟಿ ಆರ್ಡಿ, ತಂತ್ರಿ ಸದಾಶಿವ ಭಟ್ ಬೇಳಂಜೆ, ಅರ್ಚಕ ಅರುಣಾಚಲ ಜೋಯಿಸ್, ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಿರಿಯ ಸದಸ್ಯ ಶ್ರೀಧರ ಕಾಮತ್ ಕೊಂಜಾಡಿ ಇನ್ನಿತರರು ಉಪಸ್ಥಿತರಿದ್ದರು.
ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, ದುರ್ಗಾಹೋಮ, ದುರ್ಗಾಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆ, ಬಹುಮಾನ ವಿತರಣೆ, ವಿಗ್ರಹ ವಿಸರ್ಜನೆ ನಡೆಯಿತು.
ಸುದರ್ಶನ ಶೆಟ್ಟಿ ಸ್ವಾಗತಿಸಿದರು. ಸಂತೋಷ ಶೆಟ್ಟಿ ಪ್ರಸ್ತಾವಿಸಿದರು. ಗಣೇಶ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ರುದ್ರಯ್ಯ ಆಚಾರ್ಯ ವಂದಿಸಿದರು.
ಪ್ರತಿಭಾ ಪುರಸ್ಕಾರ
ಹೆಬ್ರಿ ತಾಪಂ ಉಪಾಧ್ಯಕ್ಷ ಎಸ್.ಚಂದ್ರಶೇಖರ್ ಶೆಟ್ಟಿ ಸೂರ‌್ಗೋಳಿ, ಬೆಳ್ವೆ ವಿ.ಎಸ್.ಎಸ್.ಎನ್ ಆಡಳಿತ ಮಂಡಳಿ ನಿರ್ದೇಶಕಿ ಲಲಿತಾ ಶೆಡ್ತಿ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಸಾವಿತ್ರಿ, ಆಶಾ ಕಾರ್ಯಕರ್ತೆ ವನಜಾ, ಚಂದ್ರಾವತಿ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿದ್ಯಾರ್ಜನೆಯೊಂದಿಗೆ ನಿರಂತರ ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಭಜನಾ ಮಂಡಳಿಯ ಬಾಲಕರಿಗೆ ಶ್ರೀಗಳು ಶಾಲು ಹೊದಿಸಿ, ಭಜನಾ ತಾಳ ನೀಡಿ ವಿದ್ಯಾಪ್ರಸನ್ನ ಸ್ವಾಮೀಜಿ ಗೌರವಿಸಿದರು.