ವೀರಭದ್ರೇಶ್ವರಸ್ವಾಮಿಯ ಕೊಂಡೋತ್ಸವ ಸಂಪನ್ನ

FotoJet (1)
Published on

ಕನಕಪುರ : ತಾಲೂಕಿನ ಕಸಬಾ ಹೋಬಳಿ ಶಿವನಹಳ್ಳಿ ಗ್ರಾಮದಲ್ಲಿ ಗೌರಿ ಹಬ್ಬದ ಪ್ರಯುಕ್ತ ಶ್ರೀ ಭದ್ರಕಾಳಮ್ಮ ಸಮೇತ ವೀರಭದ್ರೇಶ್ವರಸ್ವಾಮಿಯ ಕೊಂಡೋತ್ಸವ, ಭವ್ಯ ಮೆರವಣಿಗೆ ಹಾಗೂ ಗುರುಕೋರಣ್ಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಗ್ರಾಮದ ದೇವಾಲಯದಲ್ಲಿ ಸೋಮವಾರ ಸಂಜೆ ವಿವಿಧ ಪೂಜಾಮಹೋತ್ಸವ ಹಾಗೂ ಯಳವಾರ ಕಾರ್ಯಕ್ರಮಗಳು ನಡೆಯಿತು. ಸಿದ್ಧಗಂಗಾ ಮಠದಿಂದ ಅಕ್ಕಿಪೂಜೆ ನಡೆಸಲಾಯಿತು. ಮಂಗಳವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಪ್ರಧಾನ ಅರ್ಚಕ ಪ್ರಸಾದ್ ಅಗ್ನಿಕೊಂಡೋತ್ಸವ ಆಯ್ದರು. ಸುತ್ತಮುತ್ತಲ ಸಾವಿರಾರು ಭಕ್ತರು ಭಕ್ತಿಭಾವದಿಂದ ದೃಶ್ಯವನ್ನು ಕಣ್ತುಂಬಿಕೊಂಡರು. ನಂತರ ಗ್ರಾಮದಲ್ಲಿ ವೀರಗಾಸೆ, ಜಾನಪದ ಕಲಾತಂಡಗಳೊಂದಿಗೆ ದೇವರ ಉತ್ಸವ ಮೆರವಣಿಗೆ ನಡೆಸಲಾಯಿತು.
ಗುರುಕೋರಣ್ಯ: ಶಿವನಹಳ್ಳಿ ಗ್ರಾಮದಲ್ಲಿ ದೇಗುಲಮಠದ ವತಿಯಿಂದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಹಾಗೂ ಬಿಲ್ವಪತ್ರೆ ಮಠದ ಶ್ರೀ ಶಿವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಗುರುಕೋರಣ್ಯ ನಡೆಸಿದರು. ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಭಕ್ತರಿಗೆ ಆಶೀರ್ವಚನ ಮಾಡಿದರು.
ಶ್ರೀ ಚನ್ನಬಸವ ಆಶೀರ್ವಚನ ನೀಡಿ ಸಾಂಪ್ರದಾಯಿಕವಾಗಿ ಗೌರಿಹಬ್ಬ ಕಳೆದ ನಂತರ ಗ್ರಾಮದ ವೀರಭದ್ರಸ್ವಾಮಿಯ ಗೌರಿಕೊಂಡೋತ್ಸದ ಬಳಿಕ ಗುರುಕೋರಣ್ಯವನ್ನು ಪರಂಪರೆ ಅನುಚಾನವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ಬರಗಾಲ ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರ ಬದುಕಿಗೆ ತೊಂದರೆಯಾಗಿದೆ. ಆದ್ದರಿಂದ ರೈತರಿಗೆ ಮಳೆ-ಬೆಳೆಗಳಾಗಿ ಅವರ ಜೀವನ ಸಂತುಷ್ಟವಾಗಲಿ ಎನ್ನುವ ನಿಟ್ಟಿನಲ್ಲಿ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ವೀರಭದ್ರಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕರುಣೇಶ್, ತಾಪಂ ಮಾಜಿ ಸದಸ್ಯ ಹಲಗಪ್ಪ, ಚನ್ನವೀರಯ್ಯ, ಎಸ್.ಎಂ.ನಟರಾಜು, ರುದ್ರಪ್ಪ, ನಿತಿನ್, ಸ್ಟುಡಿಯೋ ಗಣೇಶ್, ಶಿವಸ್ವಾಮಿ, ಮುಖಂಡರು, ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net