

ಟಿ.ರಾಮಚಂದ್ರಪ್ಪ ಕೊಂಡ್ಲಹಳ್ಳಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ನಾಲ್ವರು ಹೆಣ್ಣು ಮಕ್ಕಳಲ್ಲಿ ಇಬ್ಬರ ಮದುವೆಯಾಗಿದ್ದು, ಉಳಿದ ಇಬ್ಬರು ಅಂಗವಿಕಲರು. ವಯಸ್ಸಾದ ತಾಯಿಯೇ ಕುಟುಂಬಕ್ಕೆ ಆಧಾರ. ಒಂದು ವರ್ಷದಿಂದ ಪಿಂಚಣಿ ಹಣ ಕೈಸೇರದೇ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಗ್ರಾಮದ ಜನತಾ ಕಾಲನಿ ನಿವಾಸಿ, ನೇಕಾರ ಸಮುದಾಯದ ಎಚ್.ಬಸಮ್ಮ ಅವರ ಕುಟುಂಬದ ಕಥೆ, ವ್ಯಥೆಯಿದು.
ಕೂಲಿ ಕೆಲಸ ಮಾಡುತ್ತಿರುವ ಬಸಮ್ಮ ಬರುವ ಅಲ್ಪ ಹಣದಲ್ಲಿ ಇಬ್ಬರು ಅಂಗವಿಕಲ ಮಕ್ಕಳ ಪಾಲನೆ ಮಾಡುತ್ತಿದ್ದಾರೆ. ಶೇ.75ರಷ್ಟು ಅಂಗವಿಕಲತೆ ಹೊಂದಿರುವ ಶಿವಲೀಲಮ್ಮ ಅವರಿಗೆ 2019ರ ಜನವರಿಯಿಂದ ಪಿಂಚಣಿ ಪ್ರಾರಂಭವಾಗಿದೆ.
ಆದರೆ, ಬಳಿಕ ಈವರೆಗೆ ಪಿಂಚಣಿ ಬಂದಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಹಾರಿಕೆ ಉತ್ತರ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಇಷ್ಟೇ ಪ್ರಯತ್ನ ಮಾಡಿದರೂ ಪಿಂಚಣಿ ಕೈಸೇರುತ್ತಿಲ್ಲ. ಇನ್ನು ಮಾತುಬಾರದ ತಿಪ್ಪಮ್ಮ ಅವರಿಗೆ ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ನಿಂತಿದೆ.
ನಾಗಸಮುದ್ರ ಗ್ರಾಮದ ಬೇರೆಯವರ ಖಾತೆ ಶಿವಲೀಲಮ್ಮನ ದಾಖಲಾತಿಗೆ ಸೇರಿಕೊಂಡಿದೆ ಎಂದು ಹೇಳಿದರು. ಬಳಿಕ ಕೊಂಡ್ಲಹಳ್ಳಿಯ ಐಒಬಿ ಬ್ಯಾಂಕಿನ ಖಾತೆ ಮಾಡಿಸಿ ದಾಖಲೆಗೆ ಲಿಂಕ್ ಮಾಡಿ ವರ್ಷ ಕಳೆದರೂ ಇದುವರೆಗೂ ಪಿಂಚಣಿ ಬಂದಿಲ್ಲ ಎಂದು ತಾಯಿ ಬಸಮ್ಮ ಅಳಲು ತೋಡಿಕೊಂಡಿದ್ದಾರೆ.
ಮೊಳಕಾಲ್ಮೂರು ತಾಲೂಕು ಕಚೇರಿಗೆ ತೆರಳಿ ವಿಚಾರಿಸಿದೆವು. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ, ಖಾತೆ ಬೇರೆ ಆಗಿದೆ.
ತಾಲೂಕು ಕಚೇರಿ ಡಿಎಸ್‌ಎಸ್‌ಪಿ ಗಣಕಯಂತ್ರ ನಿರ್ವಾಹಕ ಎಂ.ಎಸ್.ಕೃಷ್ಣನಾಯಕ್ ಹೇಳಿಕೆ: ಸರ್ಕಾರದಿಂದ ಶಿವಲೀಲಮ್ಮ ಅವರಿಗೆ ಪಿಂಚಣಿ ಬಿಡುಗಡೆಯಾಗಿದ್ದು, ಬ್ಯಾಂಕ್ ಖಾತೆಗೆ ಜಮಾ ಆಗಿರುವುದು ತೋರಿಸುತ್ತಿದೆ. ಆದರೆ, ಖಾತೆಯಲ್ಲಿ ಹಣವಿಲ್ಲ. ಜಿಲ್ಲಾಧಿಕಾರಿ ಕಚೇರಿಯ ಪಿಂಚಣಿ ವಿಭಾಗದಿಂದ ಮಾಹಿತಿ ಪಡೆಯಬಹುದು.
ತಹಸೀಲ್ದಾರ್ ಎಂ.ಬಸವರಾಜ್ ಹೇಳಿಕೆ: ಪಿಂಚಣಿ ಸಮಸ್ಯೆ ಕುರಿತು ಶೀಘ್ರ ಪರಿಶೀಲಿಸಿ ಸರಿಪಡಿಸಲಾಗುವುದು. ಅರ್ಹ ಯಾರೊಬ್ಬರಿಗೂ ಸಮಸ್ಯೆ ಆಗಬಾರದು ಎಂಬುದು ಸರ್ಕಾರದ ನಿಯಮ. ಈ ಕುರಿತು ತಕ್ಷಣ ಕ್ರಮಕೈಗೊಂಡು ಪಿಂಚಣಿ ತಲುಪಿಸುವ ಕೆಲಸ ಮಾಡಲಾಗುವುದು.