

ಕೊಂಡ್ಲಹಳ್ಳಿ: ಗ್ರಾಮ ಹಾಗೂ ಸುತ್ತಮುತ್ತಲ ಹಳ್ಳಿಯಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಉತ್ತಮ ಮಳೆಗೆ ಅಪಾರ ಆಸ್ತಿ ಹಾನಿಯಾಗಿದೆ. 25ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಮಾರಮ್ಮನಹಳ್ಳಿಯಲ್ಲಿ ಮರ ಉರುಳಿದ ಕಾರಣ ಇಸ್ಲಾಂಪುರ ರಸ್ತೆ ಬಂದ್ ಆಗಿತ್ತು. ರಾತ್ರಿಯಿಂದ ಸೋಮವಾರ ಮಧ್ಯಾಹ್ನವರೆಗೂ ವಿದ್ಯುತ್ ಸಂಪರ್ಕ ಸಹ ಇರಲಿಲ್ಲ. ಮಾರಮ್ಮನಹಳ್ಳಿ, ಕೊಂಡ್ಲಹಳ್ಳಿ, ಮೊಗಲಹಳ್ಳಿಗಳ ಇತರ ಗ್ರಾಮಗಳ ಹಳ್ಳಗಳು ಮೈದುಂಬಿ ಹರಿದಿವೆ. ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಬಿ.ಜಿ.ಕೆರೆ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ನಿಂತಿದ್ದರಿಂದ ರಾತ್ರಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ಮೊಗಲಹಳ್ಳಿ, ಕೊಂಡ್ಲಹಳ್ಳಿಯಲ್ಲಿ ಮನೆಯ ಮೇಲೆ ಮರ, ಕರೆಂಟ್ ಕಂಬ ಮುರಿದು ಬಿದ್ದು 4 ಮನೆಗೆ ಹಾನಿಯಾಗಿದೆ. ಕೋನಸಾಗರದಲ್ಲಿ ರಾಜ ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಮಾರಮ್ಮನಹಳ್ಳಿಯಲ್ಲಿ 10 ಎಕರೆಗೂ ಹೆಚ್ಚು ಬಿತ್ತನೆಯ ಈರುಳ್ಳಿ, ಟೊಮ್ಯಾಟೋ, ಉಡೇವು ಗ್ರಾಮದಲ್ಲಿ 3.9 ಎಕರೆ ಪಪ್ಪಾಯಿ, ಹನುಮಂತನಹಳ್ಳಿಯ ಎಚ್.ಇ. ಮಾರುತಿ ಅವರ ಪೌಲ್ಟ್ರಿ ಫಾರಂ ಗಾಳಿಗೆ ಹಾಳಾಗಿದೆ. ಮನೆಗಳ ಚಾವಣಿ ಹಾರಿಹೋಗಿವೆ.
ಮೈದುಂಬಿ ಹರಿಯತ್ತಿದ್ದ ಹಳ್ಳ ನೋಡಲು ಜನ ತಂಡೋಪತಂಡವಾಗಿ ರಾತ್ರಿ ಜಮಾಯಿಸಿದ್ದರು. ಬೆಳೆ ಹಾನಿ ಪ್ರದೇಶಕ್ಕೆ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಮಾಹಿತಿ ಸಂಗ್ರಹಿಸಿದರು.