ಬೆಳೆಗಳಿಗೆ ಸಮತೋಲಿತ ಪೋಷಕಾಂಶ ಅವಶ್ಯಕ: ಡಾ. ಶ್ರೀಧರ್ ಮಡಿವಾಳರ್

togari
Published on

ಕೊಂಡ್ಲಹಳ್ಳಿ: ಮನುಷ್ಯನ ಆರೋಗ್ಯಕ್ಕೆ ಸಮತೋಲಿತ ಆಹಾರ ಎಷ್ಟು ಮುಖ್ಯವೋ, ಬೆಳೆಗಳ ಸಮಗ್ರ ಬೆಳವಣಿಗೆಗೂ ಸಮತೋಲಿತ ಪೋಷಕಾಂಶ ಅಷ್ಟೇ ಮುಖ್ಯ ಎಂದು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಶ್ರೀಧರ್ ಮಡಿವಾಳರ್ ಅವರು ತಿಳಿಸಿದರು.

ಇಲ್ಲಿನ ಬಿಳಿನೀರು ಚಿಲುಮೆ ಎಫ್‌ಪಿಒ ಕಚೇರಿಯಲ್ಲಿ, ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಖಾದ್ಯ ತೈಲ ಎಣ್ಣೆಕಾಳು ಬೆಳೆ ಅಭಿಯಾನ'ದಡಿ ಆಯ್ಕೆಯಾದ ಫಲಾನುಭವಿಗಳಿಗಾಗಿ ಶೇಂಗಾ ಬೆಳೆಯ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ರೈತರು ಇಳುವರಿಯನ್ನು ಹೆಚ್ಚಿಸುವ ಉದ್ದೇಶದಿಂದ, ಮಣ್ಣಿನ ಪೋಷಕಾಂಶಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ, ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇದು ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಹದಗೆಡಿಸುತ್ತಿದೆ ಎಂದು ಡಾ. ಶ್ರೀಧರ್ ಮಡಿವಾಳರ್ ಹೇಳಿದರು.

ಬೆಳೆಗಳನ್ನು ನಾಟಿ ಮಾಡುವ ಮೊದಲು ಮಣ್ಣು ಪರೀಕ್ಷೆ ಮಾಡಿಸುವುದು ಅತಿ ಮುಖ್ಯ. ಮಣ್ಣು ಪರೀಕ್ಷೆಯಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ ಅಥವಾ ಹೆಚ್ಚುವರಿ ಅಂಶಗಳ ಬಗ್ಗೆ ತಿಳಿಯುತ್ತದೆ. ರೈತರು ಕೇವಲ ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತರಾಗದೆ, ಮಣ್ಣಿನ ಆರೋಗ್ಯಕ್ಕೆ ಸಹಕಾರಿಯಾದ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಜೀವಾಣು ಮಿಶ್ರಣಗಳನ್ನು ಸಮರ್ಪಕವಾಗಿ ಬಳಸಬೇಕು ಎಂದು ಅವರು ಸಲಹೆ ನೀಡಿದರು.

ಇದಲ್ಲದೆ, ಕೃಷಿ ಚಟುವಟಿಕೆಗಳಿಗೆ ಬಳಸುವ ನೀರಿನಲ್ಲಿ ಲವಣಾಂಶಗಳು ಹೆಚ್ಚಾಗಿದ್ದರೆ ಅದು ಬೆಳೆಗಳಿಗೆ ಹಾನಿಕಾರಕವಾಗಬಹುದು. ಆದ್ದರಿಂದ ನೀರಿನ ಪರೀಕ್ಷೆಯೂ ಸಹ ಅತ್ಯಗತ್ಯ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮೊಳಕಾಲ್ಮೂರು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಾ. ಎನ್. ವಿ. ಪ್ರಕಾಶ್ ಅವರು ಸಹ ಮಾತನಾಡಿದರು. ಕೃಷಿ ಅಧಿಕಾರಿ ಹೇಮಂತನಾಯ್ಕ, ಬಿಟಿಎಂ ನಿರಂಜನಮೂರ್ತಿ, ಎಫ್‌ಪಿಒ ಸಿಇಒ ವಿಜಯ್‌ಕುಮಾರ್, ನಿರ್ದೇಶಕ ಈಶ್ವರಪ್ಪ ಸೇರಿದಂತೆ ರೈತರಾದ ಆರ್. ಚಿದಾನಂದರೆಡ್ಡಿ, ಕೆ.ಟಿ. ನಾಗರಾಜ್, ಲಕ್ಷ್ಮಣ್ ರೆಡ್ಡಿ, ವೀರೇಶ್, ರುದ್ರಪ್ಪ, ಸಣ್ಣತಿಪ್ಪೇಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net