ಶುದ್ಧ ನೀರಿನ ಘಟಕ ದುರಸ್ತಿಗೆ ಗ್ರಾಮಸ್ಥರ ಮನವಿ

K HALLI OBANNAHALLI(A).F.18.
Published on

ಕೊಂಡ್ಲಹಳ್ಳಿ: ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಣ್ಣನಹಳ್ಳಿಯಲ್ಲಿ 2017-18ನೇ ಸಾಲಿನಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿವ ನೀರಿನ ಘಟಕ ಸ್ಥಗಿತಗೊಂಡು ಒಂದೂವರೆ ವರ್ಷವಾದರೂ ದುರಸ್ತಿ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮದ ಕೊನೆಯ ಹಳ್ಳಕ್ಕೆ ಹೊಂದಿಕೊಂಡಂತೆ ಘಟಕ ನಿರ್ಮಿಸಿದೆ. ಇದು ಆರಂಭದ 15 ದಿನಗಳಷ್ಟೇ ಕೆಲಸ ಮಾಡಿದೆ. ಸ್ಥಳೀಯರು 2 ಕಿ.ಮೀ. ದೂರದ ಕೊಂಡ್ಲಹಳ್ಳಿಗೆ ಹೋಗಿ ನೀರು ತರುವಂತಾಗಿದೆ ಎಂದು ಆಪಾದಿಸಿದ್ದಾರೆ.

ಹಳ್ಳದ ಬದಿ ಘಟಕ ನಿರ್ಮಿಸಿದ್ದರಿಂದ ಅದರ ನಿರ್ವಹಣೆ ಮತ್ತು ರಕ್ಷಣೆ ಕಷ್ಟಸಾಧ್ಯವಾಗಿದೆ. ಇದನ್ನು ಗ್ರಾಮ ಮಧ್ಯದಲ್ಲಿ ಸ್ಥಾಪಿಸಿ ಸೂಕ್ತ ನಿರ್ವಹಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗೌರಸಮುದ್ರ ಪಿಡಿಒ ಹೊನ್ನೂರಪ್ಪ ಹೇಳಿಕೆ: ಆರ್‌ಒ ಪ್ಲಾಂಟ್ ಊರಿಂದ ದೂರವಿರುವ ಕಾರಣ ಅದರ ಮೋಟಾರ್ ಇನ್ನಿತರ ವಸ್ತುಗಳು ಕಳವಾಗಿವೆ. ಗ್ರಾಮದೊಳಕ್ಕೆ ಸ್ಥಳಾಂತರಿಸಲು ಚರ್ಚಿಸಲಾಗಿದೆ. ಗ್ರಾಪಂ 14ನೇ ಹಣಕಾಸು ಯೋಜನೆಯಡಿ ಘಟಕ ನಿರ್ಮಿಸಲು ಯೋಜಿಸಲಾಗಿದೆ. ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುವುದು.

ಚಳ್ಳಕೆರೆ ಗ್ರಾಮೀಣ ಅಭಿವೃಧ್ಧಿ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಜೂನಿಯರ್ ಇಂಜಿನಿಯರ್ ಕಿರಣ್ ಹೇಳಿಕೆ: ಶುದ್ಧ ನೀರಿನ ಘಟಕಕ್ಕೆ ರಕ್ಷಣೆ ಇಲ್ಲದೆ ಎರಡು ಬಾರಿ ಸಾವಿರಾರು ರೂ.ಬೆಲೆಯ ಮೋಟರ್, ಮೆಂಬರೇನ್ ಕಳವಾಗಿವೆ. ಇದರ ಸ್ಥಳಾಂತರ ಸಂಬಂಧ ಗ್ರಾಪಂ ಪಿಡಿಒ ಬಳಿ ಚರ್ಚಿಸಿದ್ದೇನೆ. ಘಟಕಕ್ಕೆ ತಳಪಾಯ ನಿರ್ಮಾಣ ಆದ ಕೂಡಲೇ ಸ್ಥಳಾಂತರಿಸಿ ಸೇವೆಗೆ ಸಿದ್ಧಗೊಳಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net