

ಮಳವಳ್ಳಿ : ತಾಲೂಕಿನ ಬಿ.ಜಿ.ಪುರ ಸಮೀಪದ ಮುಟ್ಟನಹಳ್ಳಿ ಗ್ರಾಮದಲ್ಲಿ ಸೋಮವಾರ ಮಂಟೇಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಪ್ರತೀತಿಯಂತೆ ಭಾನುವಾರ ಗ್ರಾಮಸ್ಥರು ಜಮೀನುಗಳಿಗೆ ತೆರಳಿ ಹುಣಸೆ ಮತ್ತು ಗೊಬ್ಬಳಿ ಮರಗಳನ್ನು ಕಡಿದು ತಂದು ಮಾರಮ್ಮನ ಗುಡಿ ಆವರಣದಲ್ಲಿ ಜೋಡಣೆ ಮಾಡಿದ್ದರು. ಸಂಜೆಯ ವೇಳೆಗೆ ಗ್ರಾಮದ ಯುಮಾನರು, ಮುಖಂಡರು ಪೂಜೆ ಸಲ್ಲಿಸಿ ಕೊಂಡೋತ್ಸವಕ್ಕೆ ಸಿದ್ದಪಡಿಸಿದ್ದ ಸೌದೆ ಗುಡ್ಡೆಗೆ ಬೆಂಕಿ ಹಚ್ಚುವ ಮೂಲಕ ರಾತ್ರಿ ಬೆಂಕಿ ಕೆಂಡದ ರಾಶಿ ಮಾಡಿದರು.
ಸೋಮವಾರ ನಸುಕಿನಲ್ಲೇ ಮಂಟೇಸ್ವಾಮಿ, ಸಿದ್ದಪ್ಪಾಜಿ, ಕುರುಬನಕಟ್ಟೆ ನಿಂಗಯ್ಯ, ಚನ್ನಯ್ಯ ರವರ ಕಂಡಾಯಗಳನ್ನು ಹೊತ್ತ ಅರ್ಚಕರನ್ನು ಗ್ರಾಮದ ಹೊರ ವಲಯದಲ್ಲಿರುವ ನಿಂಗಯ್ಯನಕಟ್ಟೆ ಬಳಿ ಕರೆತಂದು ಪೂಜೆ ಸಲ್ಲಿಸಿದರು.
ನಂತರ ಹೂ, ಹೊಂಬಾಳೆ ಮೂಲಕ ತಮಟೆ, ನಗಾರಿ, ಮಂಗಳ ವಾದ್ಯದೊಡನೆ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿಗೆ ಕರೆತಂದರು. ಈ ವೇಳೆ ಕೊಂಡೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕಂಡಾಯಗಳನ್ನು ಹೊತ್ತ ಅರ್ಚಕರು ಬೆಂಕಿ ರಾಶಿಯನ್ನು ತುಳಿದುಕೊಂಡು ಸಾಗಿದರು. ನೆರೆದ ಭಕ್ತ ಸಮೂಹ ಘೋಷಣೆಗಳನ್ನು ಕೂಗುವ ಮೂಲಕ ಭಕ್ತಿ ಸಮರ್ಪಿಸಿದರು.
ನಂತರ ಗ್ರಾಮದ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ನಡೆಸಲಾಯಿತು. ಹಬ್ಬದ ಪ್ರಯುಕ್ತ ಮನೆ ಮನೆಗೂ ತಳಿರು ತೋರಣಗಳನ್ನು ಕಟ್ಟಿ ರಸ್ತೆಗಳಲ್ಲಿ ರಂಗೋಲಿ ಚಿತ್ತಾರಗಳನ್ನು ಬಿಡಿಸಲಾಗಿತ್ತು. ಕೊಂಡೋತ್ಸವದಲ್ಲಿ ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ನೀಲಗಾರರು, ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಭಕ್ತರು ಬೆತ್ತ-ಜೋಳಿಗೆಯೊಂದಿಗೆ ಪಾಲ್ಗೊಂಡಿದ್ದರು.