ಕೋಣಂದೂರು ಲಿಂಗಪ್ಪ ಅಪರೂಪದ ರಾಜಕಾರಣಿ: ಬಿ.ಚಂದ್ರೇಗೌಡ

25 TTH 01
ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರಿಗೆ 90ನೇ ವರ್ಷದ ಅಭಿನಂದನಾ ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಗ್ರಂಥ ಬಿಡುಗಡೆ ಮಾಡಿದರು. ಟಿ.ಕೆ.ರಮೇಶ್ ಶೆಟ್ಟಿ, ಕಲ್ಗದ್ದೆ ರತ್ನಾಕರ್ ಇತರರಿದ್ದರು.
Published on

ತೀರ್ಥಹಳ್ಳಿ: ಇತಿಹಾಸದ ಮೌಲ್ಯವಾಗಿ ನಮ್ಮೊಂದಿಗಿರುವ ಕೋಣಂದೂರು ಲಿಂಗಪ್ಪ ಅವರು ರಾಜಕಾರಣಿಗಳಿಗೆ ಆದರ್ಶ ವ್ಯಕ್ತಿಯಾಗಿರುವ ಶಾಂತವೇರಿ ಗೋಪಾಲಗೌಡರನ್ನು ಅನುಸರಿಸಿದ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಸಾಹಿತಿ ಬಿ.ಚಂದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೋಣಂದೂರು ಲಿಂಗಪ್ಪ ಅಭಿನಂದನಾ ಸಮಿತಿಯಿಂದ ಶನಿವಾರ ಸಂಜೆ ಪಟ್ಟಣದ ಕನ್ನಡ ಭವನದಲ್ಲಿ ಲಿಂಗಪ್ಪ ಅವರಿಗೆ 90ನೇ ವರ್ಷದ ಅಭಿನಂದನೆ ಮತ್ತು ಸಾಹಿತಿ ಡಾ. ಜೆ.ಕೆ.ರಮೇಶ್ ಸಂಪಾದಿಸಿದ ಕೋಲಿಂ ಎಂಬ ಕೌತುಕ ಅಭಿನಂದನಾ ಗ್ರಂಥದ ದ್ವಿತೀಯ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಕೃತಿಯ ಕುರಿತು ಮಾತನಾಡಿದರು.
ನವೋದಯದ ಕಾಲಘಟ್ಟದ ಸಾಹಿತಿಗಳ ಒಡನಾಟವನ್ನು ಹೊಂದಿದ್ದ ಲಿಂಗಪ್ಪ ಕನ್ನಡ ಚಳವಳಿಯ ರೂವಾರಿಗಳಲ್ಲಿ ಒಬ್ಬರಾಗಿದ್ದರು. ಭೂ ಸುಧಾರಣೆ ಕಾಯ್ದೆ ಜಾರಿಗೆ ಶ್ರಮಿಸಿದ್ದರಲ್ಲದೆ, ಶಾಸಕರಾಗಿ ಅತೀ ಹೆಚ್ಚು ಸಾಗುವಳಿ ಚೀಟಿ ವಿತರಿಸಿದವರು ಎಂದು ಹೇಳಿದರು.
ಸಮಾಜವಾದಿ ಸಿದ್ಧಾಂತದ ಪ್ರತಿಪಾದಕರು ಇನ್ನೊಬ್ಬರ ಜೇಬನ್ನೇ ಅವಲಂಬಿಸಬೇಕು. ಶ್ರೀಯುತರು ಕೆಳ ಜಾತಿಯವರಾದ ಕಾರಣ ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದರೂ ಕೀಳಾಗಿ ಕಂಡವರನ್ನು ಕ್ಷಮಿಸಿದ್ದಾರೆ. ಈ ಗ್ರಂಥ ಬಾರದಿದ್ದರೆ ಓರ್ವ ಅನುಕರಣೀಯ ವ್ಯಕ್ತಿಯ ಪ್ರಾಮಾಣಿಕ ವ್ಯಕ್ತಿತ್ವದ ಪರಿಚಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಂಗಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಜ್ಞಾನವನ್ನು ಸಮಾಜದಲ್ಲಿ ತುಳಿತಕ್ಕೊಳಗಾದವರ ಬಗೆಗಿನ ಕಾಳಜಿಯನ್ನು ಹೊಂದಿರುವ ಶ್ರೀಯುತರು ರಾಜಕೀಯ ಕ್ಷೇತ್ರದ ಅಪ್ಪಟ ಚಿನ್ನದಂತಹ ವ್ಯಕ್ತಿಯಾಗಿದ್ದಾರೆ. ಸದನದಲ್ಲಿ ಇವರು ತಮಗೆ ಅನಿಸಿದ್ದನ್ನು ನಿರ್ಭಯವಾಗಿ ಪ್ರತಿಪಾದಿಸುತ್ತಿದ್ದ ರೀತಿ ಅನುಕರಣೀಯ. ಜಾತಿ, ಹಣ ಯಾವುದರ ಪ್ರಭಾವವೂ ಇಲ್ಲದೆ ಈ ಕ್ಷೇತ್ರದಿಂದ ಹಲವು ಬಾರಿ ಜಯ ಸಾಧಿಸಿದ್ದರು ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸೆಕ್ಯುಲರ್ ಎಂಬ ಪದವೇ ಮೋಸದಿಂದ ಕೂಡಿದ್ದು. ಈಗ ಜಾತಿಯೇ ಪ್ರಧಾನವಾಗಿದೆ. ಈ ಕಾಲಘಟ್ಟದಲ್ಲಿ ಜಾತ್ಯಾತೀತತೆ ಎಂಬುದು ಹಳಸಲಾಗಿದ್ದು, ಸಿದ್ಧಾಂತ ಭಾಷಣಕ್ಕೆ ಸೀಮಿತವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹಿಂದೆ ಮತದಾರರಲ್ಲಿ ಬಡವರ ಪರ ಎಂಬ ಒಲವಿತ್ತು. ಪ್ರಸ್ತುತ ಚುನಾವಣೆ ಮಾಡುವ ತಾಕತ್ತು ಇದೆಯೇ ಎಂಬಂತಾಗಿದೆ. ಲಿಂಗಪ್ಪನವರು ಬಿಟ್ಟ ಜಾಗಕ್ಕೆ ನಾವು ಬಂದವರು. ಆ ಸಂದರ್ಭದಲ್ಲಿ ಅವರು ಆ್ಯಕ್ಟಿವ್ ಆಗಿದ್ದರೆ ನಮಗೆ ಅವಕಾಶವೇ ಇರುತ್ತಿರಲಿಲ್ಲ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಗ್ರಂಥ ಬಿಡುಗಡೆ ಮಾಡಿದರು. ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಕಲ್ಗದ್ದೆ ರತ್ನಾಕರ್, ಹಾಲಿಗೆ ನಾಗರಾಜ್, ಗಾಯತ್ರಿ ಶೇಷಗಿರಿ ಇದ್ದರು.

72ರ ಚುನಾವಣೆಯಲ್ಲಿ ಗೋಪಾಲಗೌಡರ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದ್ದ ಗುರುಗಳಿಗೆ ಚುನಾವಣಾ ಫಲಿತಾಂಶವನ್ನು ತಿಳಿಸಿ ನೀವು ಗೆದ್ದಿದ್ದೀರಿ ಎಂದಾಗ ಅವರ ಕಣ್ಣುಗಳಲ್ಲಿ ನೀರಿಳಿಯುತ್ತಿತ್ತು.ಕೋಣಂದೂರು ಲಿಂಗಪ್ಪಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net