

ತೀರ್ಥಹಳ್ಳಿ: ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆಯಲ್ಲಿ ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಅಡಿಯಲ್ಲಿ ಬುಧವಾರ ಶಿವಮೊಗ್ಗದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆಯಲ್ಲಿ ಹಿಂದಿ ಭಾಷೆಯಲ್ಲಿ ನಾಟಕ ಪ್ರದರ್ಶಿಸಿದ ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸ್ವಸ್ತಿಕ್, ಜೆ.ಪ್ರೀತಮ್, ಅಶ್ವಿನ್ ಎಂ.ಎಸ್. ಶೃಂಗಶ್ರೀ, ಎಂ.ವೈಷ್ಣವಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು. ವಿಷಯಕ್ಕೆ ಪ್ರಾಮುಖ್ಯತೆ ಇರುವ ಈ ಸ್ಪರ್ಧೆಯಲ್ಲಿ ಸಂಭಾಷಣೆ ಮಾತ್ರ ಇರುತ್ತದೆ. ಕಾಸ್ಟೂೃಮ್ ಮತ್ತು ಮೇಕಪ್ ಕೂಡ ಇರುವುದಿಲ್ಲ. ರಾಷ್ಟ್ರಮಟ್ಟದ ಸ್ಪರ್ಧೆ ಆಗಿರುವ ಕಾರಣ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸಂಭಾಷಣೆಗೆ ಅವಕಾಶವಿದೆ. ಇಂದಿನ ಯುವ ಪೀಳಿಗೆ, ಅದರಲ್ಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೇಗೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಾರೆ. ಅಂತಹ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಸ್ಥಿತಿ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕತೆಯನ್ನು ಕೋಣಂದೂರಿನ ಚಿಣ್ಣರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಶಾಲೆಯ ರಂಗಕಲಾ ಶಿಕ್ಷಣ ಶಿಕ್ಷಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ್ ಕುಮಟಾ ನಿರ್ದೇಶನದ ಹೊಣೆ ಹೊತ್ತಿದ್ದರು.