ಅಕ್ರಮ ಖಾತೆ ರದ್ದುಪಡಿಸುವಂತೆ ಆಗ್ರಹ: ಕೋಣನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

Konanahalli villagers protest Mandya
Published on

ಮಂಡ್ಯ: ತಾಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಗೆ ಸೇರಿದ ಸರ್ಕಾರಿ ನಿವೇಶನವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಯೊಬ್ಬರಿಗೆ ಮಾಡಿಕೊಟ್ಟಿರು ಖಾತೆ ರದ್ದುಪಡಿಸುವಂತೆ ಒತ್ತಾಯಿಸಿ ಕೋಣನಹಳ್ಳಿ ಗ್ರಾಮಸ್ಥರು ನಗರದ ತಾಲೂಕು ಪಂಚಾಯಿತಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಕೋಣನಹಳ್ಳಿ ಗ್ರಾಮದಿಂದ ತಾಲೂಕು ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಾಲೂಕು ಪಂಚಾಯಿತಿ ಇಒ ವೀಣಾ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮದಲ್ಲಿದ್ದ ಸರ್ಕಾರಿ ನಿವೇಶನವನ್ನು ಟಿ.ನರಸೀಪುರ ತಾಲೂಕು ತಲಕಾಡು ಹೋಬಳಿ ಬಣವೆ ಗ್ರಾಮದ ಬಸವರಾಜು ಎಂಬುವರಿಗೆ ಪಂಚಾಯಿತಿ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಈ ನಿವೇಶನವನ್ನು ಗ್ರಂಥಾಲಯ ನಿರ್ಮಾಣಕ್ಕೆಂದು ಮೀಸಲಿರಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಡುವ ಮೂಲಕ ಸರ್ಕಾರ ಮತ್ತು ಗ್ರಾಮಸ್ಥರನ್ನು ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ತಾಲೂಕು ಪಂಚಾಯಿತಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಸದರಿ ಮೇಲ್ಮನವಿಯನ್ನೂ ಏಕಪಕ್ಷೀಯವಾಗಿ ಆದೇಶ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ನಿವೇಶನ ಪಡೆದ ಬಸವರಾಜು ನಮಗೆ ಸರ್ಕಾರ ನಿವೇಶನ ಮಂಜೂರು ಮಾಡಿದೆ ಎಂದು ಹೇಳುತ್ತಾರೆಂದು ದೂರಿದರು. ನಿವೇಶನವನ್ನು ಗ್ರಾಮ ಪಂಚಾಯಿತಿಯಲ್ಲೇ ಗ್ರಂಥಾಲಯಕ್ಕೆಂದು ಮೀಸಟಿದ್ದು, ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಪಂಚಾಯಿತಿ ಖಾತೆಯಲ್ಲೇ ಇರಬೇಕು. ತಕ್ಷಣ ಬಸವರಾಜುಗೆ ಮಾಡಿಕೊಟ್ಟಿರುವ ಖಾತೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಂಡ್ಯ ಗ್ರಾಮಾಂತರ ಪಂಚಾಯಿತಿ ಅಧ್ಯಕ್ಷ ಆನಂದ, ಸದಸ್ಯರಾದ ಎಲ್.ಕುಮಾರ್, ಮಧುಕರ್, ಪಿ.ಜೆ. ಲೋಕೇಶ್, ಮುಖಂಡರಾದ ಅಣ್ಣೇಗೌಡ, ರಾಕೇಶ, ನಾಗೇಶ, ಕಾಂತರಾಜು, ನಾರಾಯಣ, ವೆಂಕಟೇಶ, ಕೆ.ಪಿ.ದೇವರಾಜು, ಧನಂಜಯ, ಸಿದ್ದೇಗೌಡ, ಶೇಖರ್, ಕೆ.ಎಸ್.ರವೀಂದ್ರ, ಶ್ರೀನಿವಾಸ, ವೆಂಕಟೇಶ, ನಿಂಗಣ್ಣ, ರಾಜೇಶ, ವರದೇಗೌಡ, ಮಹದೇವ, ಶಿವಲಿಂಗೇಗೌಡ, ರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net