ಕೊಣಾಜೆ ಪಿಎಸ್ಐಗೆ ಕಳವು ಆರೋಪಿಯಿಂದ ಇರಿತ

IMG_20220324_120054
Published on

ಮಂಗಳೂರು: ನಗರದ ಹೊರವಲಯದಲ್ಲಿ ವಾಚ್ ಕಳ್ಳತನದ ಆರೋಪಿಯನ್ನು ಹಿಡಿಯಲು ತೆರಳಿದ ಪಿಎಸ್ ಐ ಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಹಲ್ಲೆಯಿಂದ ಗಾಯಗೊಂಡಿರುವ ಪಿಎಸ್ ಐ ಶರಣಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇರಿದ ಮಹಮ್ಮದ್ ಸಾದಿಕ್ ಪರಾರಿಯಾಗಿದ್ದು ಆತನಿಗೆ ಸಹಕರಿಸಿದ ಸಹೋದರ ನಝೀರ್ ಎಂಬವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಲೆಬಾಳುವ ವಾಚ್ ಕಳ್ಳತನದ ಆರೋಪಿ ಮಹಮ್ಮದ್ ಸಾದಿಕ್ ಪಾವೂರಿನಲ್ಲಿ ತನ್ನ ಅತ್ತೆ ಮನೆಯಲ್ಲಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದರು. ಮಂಗಳೂರಿನ ಬಂದರು ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಬೆಲೆಬಾಳುವ ವಾಚ್ ಕಳ್ಳತನ ಪ್ರಕರಣ ನಡೆದಿತ್ತು. ಕೃತ್ಯ ನಡೆಸಿದ ಆರೋಪಿ ಮಹಮ್ಮದ್ ಸಾದಿಕ್ ನಟೋರಿಯಸ್ ಆಗಿದ್ದು ಈ ಹಿಂದೆ ಕೂಡ ಬಂದರು ಪೊಲೀಸ್ ಸಿಬ್ಬಂದಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಕಾಸರಗೋಡು ಕಡೆಯಿಂದ ಕದ್ದು ತಂದಿದ್ದ ಬೆಲೆಬಾಳುವ ವಾಚನ್ನು ಅಂಗಡಿಯೊಂದಕ್ಕೆ ಮಾರಾಟ ಮಾಡಲು ಬಂದಿದ್ದ ಬಗ್ಗೆ ಮಾಹಿತಿಯನ್ನು ಅಂಗಡಿ ಮಾಲಿಕರೇ ಪೊಲೀಸರಿಗೆ ತಿಳಿಸಿದ್ದರು. ನಗರದ ಬಂದರು ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ್ದಾಗ ಪೊಲೀಸ್ ಸಿಬಂದಿ ವಿನೋದ್ ಮತ್ತು ಪ್ರವೀಣ್ ಎಂಬವರಿಗೆ ಚೂರಿಯಿಂದ ಹಲ್ಲೆಗೈದು ಪರಾರಿಯಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net