6ರಿಂದ ಕೊಲ್ಯ ಶಾರದಾ ಮಹೋತ್ಸವ : ಮಂದಿರ ಲೋಕಾರ್ಪಣೆ ಪ್ರವೀಣ್ ಎಸ್.ಕುಂಪಲ ಮಾಹಿತಿ

Ull_Sharada
Published on

ಉಳ್ಳಾಲ: ಕೊಲ್ಯದ ಶ್ರೀ ಶಾರದಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಶ್ರೀ ಶಾರದಾ ಮಂದಿರ ನಿರ್ಮಾಣ ಸಮಿತಿ ಸಂಯುಕ್ತ ಆಶ್ರಯದಲ್ಲಿ 43ನೇ ವರ್ಷದ ಶಾರದಾ ಮಹೋತ್ಸವ ಅ.6ರಿಂದ 12ರ ವರೆಗೆ ನಡೆಯಲಿದ್ದು, ಅ.7ರಂದು ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಾರದಾ ಮಂದಿರದ ಲೋಕಾರ್ಪಣೆಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ, ಪ್ರಚಾರ ಸಮಿತಿ ಪ್ರದಾನ ಸಂಚಾಲಕ ಪ್ರವೀಣ್ ಎಸ್.ಕುಂಪಲ ಮಾಹಿತಿ ನೀಡಿದರು.

6ರಂದು ಬೆಳಗ್ಗೆ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್ ಅವರಿಂದ ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ4ಕ್ಕೆ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಶಾರದಾ ಮಾತೆ ನೂತನ ಬೆಳ್ಳಿಯ ಬಿಂಬದೊಂದಿಗೆ ಹೊರೆಕಾಣಿಕೆ ಶೋಭಾಯಾತ್ರೆಗೆ ಚೀರುಂಭ ಭಗವತೀ ಕ್ಷೇತ್ರದ ಪ್ರದಾನ ಅರ್ಚಕ ಮಂಜಪ್ಪ ಕಾರ್ನವರ್ ಚಾಲನೆ ನೀಡಲಿದ್ದಾರೆ. 7.30ಕ್ಕೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ.

7ರಂದು ಬೆಳಗ್ಗೆ ಸೋಮೇಶ್ವರ ಸೋಮನಾಥ ದೇವಸ್ಥಾನದ ಅರ್ಚಕ ಮಧ್ವೇಶ್ ಭಟ್ ಪೌರೋಹಿತ್ಯದಲ್ಲಿ ಶಾರದಾ ಮಾತೆ ನೂತನ ಬೆಳ್ಳಿಯ ಬಿಂಬ ಪ್ರತಿಷ್ಠಾಪನೆ. 10.30ಕ್ಕೆ ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ನೂತನ ಶಾರದಾ ಮಂದಿರ ಲೋಕಾರ್ಪಣೆ. ಗುರುಪುರ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ . ಸಂಜೆ ಧಾರ್ಮಿಕ ಸಭೆಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಅಧ್ಯಕ್ಷ ಮೋಹನ್ ಆಳ್ವ ಉದ್ಘಾಟಿಸಲಿದ್ದು, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.

8ರಂದು ಬೆಳಗ್ಗೆ ಏಕಾಹ ಭಜನೆ, ಸಂಜೆ 5.30ಕ್ಕೆ ಶಾರದಾ ಮಾತೆ ವಿಗ್ರಹ ಮೆರವಣಿಗೆಯೊಂದಿಗೆ ಮಂದಿರಕ್ಕೆ ಪ್ರವೇಶಿಸಲಿದೆ. ಅ.9ರಂದು ಬೆಳಗ್ಗೆ 8.20ಕ್ಕೆ ಅರ್ಚಕ ಮಧ್ವೇಶ್ ಭಟ್ ಪೌರೋಹಿತ್ಯದಲ್ಲಿ ಶಾರದಾ ಮಾತೆ ವಿಗ್ರಹದ ಪ್ರತಿಷ್ಠಾಪನೆ. 11ಕ್ಕೆ ಶಾರದಾ ಮಹಿಳಾ ಮಂಡಳಿ ಸದಸ್ಯರಿಂದ ಲಲಿತ ಸಹಸ್ರನಾಮ, ಮಕ್ಕಳಿಗೆ ವಿದ್ಯಾರಂಭ ಪೂಜೆ ನಡೆಯಲಿದೆ. ರಾತ್ರಿ 9ಕ್ಕೆ ವಿಧಾತ್ರಿ ಕಲಾವಿದೆರ್ ಕುಡ್ಲದ ಕಲಾವಿದರಿಂದ ದೈವರಾಜೆ ಶ್ರೀ ಬಬ್ಬು ಸ್ವಾಮಿ ಭಕ್ತಿ ಪ್ರದಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

10ರಂದು ಸಂಜೆ 6.30ಕ್ಕೆ ಮಾತೃ ಸಂಗಮ ನಡೆಯಲಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಊರ್ಮಿಳ ರಮೇಶ್ ಕುಮಾರ್ ಸಭೆ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಸಾದ್ವಿ ಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ.

11ರಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಭಾ ಸಮಾರೋಪ . ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ ಉದ್ಘಾಟಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಜೆ 7ಕ್ಕೆ ಭಕ್ತಿ-ಭಾವ ಸಂಗೀತ, ಚಿತ್ರ ವೈಭವ ನಡೆಯಲಿದೆ. ರಾತ್ರಿ 8ಕ್ಕೆ ರಂಗ ಪೂಜೆ ನಡೆದು ಮಹಾಪೂಜೆ ನೆರವೇರಲಿದೆ.

12ರಂದು ಸಂಜೆ 6.30ಕ್ಕೆ ಶ್ರೀ ಶಾರದಾ ಮಾತೆಗೆ ವಿಸರ್ಜನಾ ಮಹಾಪೂಜೆ.ಕೊಲ್ಯದಿಂದ ಕೋಟೆಕಾರು ಮಾರ್ಗವಾಗಿ ಶೋಭಾಯಾತ್ರೆ, ಸೋಮೇಶ್ವರ, ಸೋಮನಾಥ ದೇವಸ್ಥಾನದ ಕಡಲ ಕಿನಾರೆಯಲ್ಲಿ ಶಾರದಾ ಮಾತೆ ವಿಗ್ರಹ ಜಲ ಸ್ತಂಭನಗೊಳಿಸಲಾಗುವುದು. ಶಾರದಾ ಮಹೋತ್ಸವದ ಏಳು ದಿನ ಮದ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು.

ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಎಚ್., ಶಾರದಾ ಉತ್ಸವ ಸಮಿತಿ ಅಧ್ಯಕ್ಷ ಗಣೇಶ್ ಕೊಲ್ಯ, ಟ್ರಸ್ಟ್ ಪ್ರದಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ.ಎಸ್., ಶಾರದಾ ಮಂದಿರ ನಿರ್ಮಾಣ ಸಮಿತಿ ಪ್ರದಾನ ಕಾರ್ಯದರ್ಶಿ ತೋನ್ಸೆ ಪುಷ್ಕಲ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net