

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕರೊನಾ ಬಳಿಕ ಸ್ಥಗಿತಗೊಂಡ ಸೇವೆಗಳು ಸೋಮವಾರ ಪುನರಾರಂಭಗೊಂಡಿದ್ದು, ಭಕ್ತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ.
ಕ್ಷೇತ್ರದ ಮಹತ್ವದ ಸೇವೆಯಾಗಿರುವ ಚಂಡಿಕಾಹೋಮದಲ್ಲಿ ಐದು ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕುಂಕುಮಾರ್ಚನೆ, ಅಲಂಕಾರ ಪೂಜೆ, ಅಭಿಷೇಕ, ಪ್ರಸಾದ ವಿತರಣೆ ಸಹಿತ ಇತರೆಲ್ಲ ಸೇವೆಗಳು ಎಂದಿನಂತೆ ನಡೆಯುತ್ತಿದೆ.
ಅನ್ನದಾನವೂ ನಡೆಯುತ್ತಿದ್ದು, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸೇರಿ 600ಕ್ಕೂ ಅಧಿಕ ಭಕ್ತರು ಭಾಗವಹಿಸುತ್ತಿದ್ದಾರೆ. ಸದ್ಯ ಬಫೆಟ್ ಮಾದರಿಯಲ್ಲಿ ಅನ್ನಪ್ರಸಾದ ವಿತರಣೆ ನಡೆಯುತ್ತಿದೆ.
ಕ್ಷೇತ್ರದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಭಕ್ತರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿಯೇ ಒಳಗೆ ಬಿಡಲಾಗುತ್ತಿದೆ. ಮಾಸ್ಕ್ ಧರಿಸದವರಿಗೆ ಪ್ರವೇಶ ನಿಷೇಷಿಸಲಾಗಿದೆ.
ಕುಕ್ಕೆಯಲ್ಲಿ ಜಾರಿಯಾಗದ ಆದೇಶ: ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಸೆ.1ರಿಂದಲೇ ಸೇವೆಗಳ ಆರಂಭಕ್ಕೆ ಸರ್ಕಾರ ಆದೇಶ ಹೊರಡಿಸಿದ್ದರೂ ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇನ್ನೂ ಯಾವುದೇ ಸೇವೆಗಳು ಆರಂಭಗೊಂಡಿಲ್ಲ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕ್ಷೇತ್ರದಲ್ಲಿ ಆಶ್ಲೇಷಾ ಬಲಿ, ಸರ್ಪಸಂಸ್ಕಾರ ಸಹಿತ ಎಲ್ಲ ಸೇವೆಗಳನ್ನು ಕೋವಿಡ್ ಮಾರ್ಗಸೂಚಿಯಂತೆ ಆರಂಭಿಸಲಾಗುತ್ತಿದೆ. ಶೀಘ್ರದಲ್ಲೇ ಲಾಡ್ಜ್‌ಗಳನ್ನೂ ಆರಂಭಿಸಲಾಗುವುದು ಎಂದು ಶುಕ್ರವಾರ ‘ವಿಜಯವಾಣಿ’ಗೆ ತಿಳಿಸಿದ್ದರು. ಆದರೆ, ಮಾರ್ಗಸೂಚಿ ಸಿದ್ಧವಾಗಿಲ್ಲ ಎಂಬ ಕಾರಣ ನೀಡಿ ಸೇವೆ ಆರಂಭಿಸಲಾಗಿಲ್ಲ. ಪ್ರಸಕ್ತ ದೇವರ ದರ್ಶನಕ್ಕಷ್ಟೇ ಭಕ್ತರಿಗೆ ಅವಕಾಶವಿದೆ.