

ಕೊಳ್ಳೇಗಾಲ: ಹನೂರು ವಿಧಾನಸಭಾ ಕ್ಷೇತ್ರದ 98 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 192 ಕೋಟಿ ರೂ. ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವೀಕ್ಷಣೆ ಮಾಡಿದರು.
ಡಿ.12ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲದ ಪಾಳ್ಯದ ಬಳಿ ಇರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು. ಶುದ್ಧ ನೀರಿನ ಸಂಗ್ರಹ ಘಟಕ, ಶುದ್ಧೀಕರಣ ಕಾರ್ಯಗಾರ, ಪಂಪ್‌ಹೌಸ್ ಸೇರಿದಂತೆ ಇತರೆ ವಿಭಾಗಗಳನ್ನು ವೀಕ್ಷಿಸಿದರು. ಮಳೆಗಾಲದಲ್ಲಿಯೂ ಸಹಾ ಶುದ್ಧ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಆರ್.ನರೇಂದ್ರ ಗಿಡನೆಟ್ಟು ನೀರೆದರು. ಬಳಿಕ ಸರಗೂರಿಗೆ ತೆರಳಿ ಕಾವೇರಿ ನದಿ ದಂಡೆಯ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಜಾಕ್ವೆಲ್ ಮತ್ತು ಪಂಪ್ ಹೌಸ್ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕೆಲ ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಪಂ ಸಿಇಒ ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗಂಗಾಧರಯ್ಯ, ಉಪ ವಿಭಾಗೀಯಾಧಿಕಾರಿ ಗೀತಾ ಹುಡೇದಾ ಇತರೆ ಅಧಿಕಾರಿಗಳು ಇದ್ದರು.