

ಕೊಳ್ಳೇಗಾಲ: ಧಾರ್ಮಿಕ ಮತ್ತು ಅಧ್ಯಾತ್ಮ ಚಿಂತನೆಯನ್ನು ಜಗತ್ತಿಗೆ ಸಾರಿದ್ದು ನಮ್ಮ ದೇಶ ಎಂದು ಶಾಸಕ ಎನ್. ಮಹೇಶ್ ಹೇಳಿದರು.
ಪಟ್ಟಣದ ಎಂ.ಜಿ.ಎಸ್.ವಿ. ಕಾಲೇಜು ಆವರಣದಲ್ಲಿ ಗುರುವಾರ ಬ್ರಹ್ಮಕುಮಾರಿ ಈಶ್ವರೀಯ ವಿವಿ ಅಯೋಜಿಸಿದ್ದ 21 ಅಡಿ ಶಿವಲಿಂಗ ದರ್ಶನ, ದ್ವಾದಶ ಜ್ಯೋತಿರ್ಲಿಂಗ ಪುಣ್ಯ ದರ್ಶನ ಮತ್ತು ಪ್ರವಚನ ಮಾಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಕ್ತಿ ಮಾರ್ಗ, ಪೂಜೆ, ಧ್ಯಾನ ಮಾರ್ಗಗಳನ್ನು ಪ್ರಾಚೀನರು ನಮಗೆ ದರ್ಶನ ಮಾಡಿಸಿದ್ದಾರೆ. ಶಿವ ಯಾರು ಎಂದು ತಿಳಿಯಲು ಹೋದಂತೆ, ಶಿವ ಯಾವ ಅಳತೆಗೂ ನಿಲುಕದ ಚೈತನ್ಯಸ್ವರೂಪಿಯಾಗಿರುವುದು ತಿಳಿಯುತ್ತದೆ ಎಂದರು.
ಶಿವರಾತ್ರಿ ಆಚರಣೆ ಹತ್ತಿರವಾಗಿದೆ. ಈ ವೇಳೆ ಎಲ್ಲರೂ ಶಿವನ ನೆನೆಯುತ್ತಾರೆ. ಅಂತಹ ಶಿವರಾತ್ರಿ ವೇಳೆ ಬ್ರಹ್ಮಕುಮಾರಿ ಈಶ್ವರೀಯ ವಿವಿಯಿಂದ ಶಿವನ ನೆನೆಯುವ ಕಾರ್ಯಕ್ರಮ, ಪ್ರವಚನ ಅಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು. ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮಿಜಿ ಆಶೀರ್ವಚನ ನೀಡಿ, ಶಿವರಾತ್ರಿ ಸಂದರ್ಭ ಶಿವಲಿಂಗಗಳ ದಿವ್ಯ ದರ್ಶನ ಮಾಡಲು ಒಂದೆಡೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಈಶ್ವರ ಸಕಲ ಜೀವಗಳ ಹೃದಯಸ್ಥಾನದಲ್ಲಿ ಇದ್ದಾನೆ. ಆತ ಜಗತ್ತಿನ ಎಲ್ಲ ಜೀವಗಳನ್ನು ಸಂರಕ್ಷಿಸುತ್ತಿದ್ದಾನೆ. ಲೌಕಿಕ ವ್ಯವಹಾರದ ಅಜ್ಞಾನದ ಬಟ್ಟೆಯಿಂದ ಸೂಕ್ಷ್ಮ ಅರಿವಿನ ಕಣ್ಣುಗಳನ್ನು ಕಟ್ಟಿಕೊಂಡು ಕನ್ನಡಿಯಲ್ಲಿ ವೀಕ್ಷಿಸಿದರೆ ಭಗವಂತ ಕಾಣಲಾರ ಎಂದರು. ಮುಡಿಗುಂಡದ ಶ್ರೀಕಂಠ ಸ್ವಾಮಿಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮತ್ತು ಮಾನಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ದತ್ತೇಶ್‌ಕುಮಾರ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಎಸ್.ಬಾಲರಾಜು, ಬಿ.ಕೆ. ಲಕ್ಷ್ಮೀಜೀ, ರಂಗನಾಥ್, ಪ್ರಭಾಮಣಿ ಮತ್ತಿತರಿದ್ದರು.