

ಕೊಳ್ಳೇಗಾಲ: ರಾಜ್ಯ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಸುಮಾರು 22 ಬೇಡಿಕೆಗಳನ್ನು ಈಡೇರಿಸುವಂತೆ ಸೋಮವಾರ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಆವರಣದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಘೋಷಣೆಗಳ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಮಂಜುಳಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.
ಮುಡಿಗುಂಡ ಹಾಗೂ ಸತ್ತೇಗಾಲ ಪಿಎಸಿಸಿ ಬ್ಯಾಂಕ್‌ನಲ್ಲಿ ಕಾರ್ಯದರ್ಶಿ ರಾಮು ರೈತರ ಠೇವಣಿ ಹಣ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ದೂರು ಕೊಟ್ಟು ಆರು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಸಹಕಾರ ಇಲಾಖೆಯ ಉಪನಿಬಂಧಕ ದಯಾನಂದ್ ಆಡಿಟ್ ವರದಿ ನಿರೀಕ್ಷೆಯಲ್ಲಿದ್ದು, ದುರುಪಯೋಗ ಖಚಿತ ಪಡಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಉತ್ತರ ನೀಡಿದರು.
ಕೊಳ್ಳೇಗಾಲ ಕಸಬಾ-ಪಾಳ್ಯ ಹೋಬಳಿಯ ಪ್ರತಿ ಹಳ್ಳಿಯಲ್ಲೂ ನಿರಂತರ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದವರ ಕುರಿತು ಗೌಪ್ಯತೆ ಕಾಪಾಡುತ್ತಿಲ್ಲ ಎಂದು ರೈತ ಮುಖಂಡ ಶೈಲೇಂದ್ರ ಅಬಕಾರಿ ಇಲಾಖೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು. ಅಕ್ರಮವಾಗಿ ಮದ್ಯ ಮಾರಾಟಗಾರರ ಆಧಾರ್ ಹಾಗೂ ಪಡಿತರ ಚೀಟಿ ರದ್ದುಗೊಳಿಸುವಂತೆ ಆಗ್ರಹಿಸಿದರು.
ಜಾಗೇರಿ ಗ್ರಾಮದ ಮಾರ್ಗದಲ್ಲಿ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ಸ್ ವ್ಯವಸ್ಥೆಯಿಲ್ಲ. ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ಬೆಳಗ್ಗೆ ಸಮಯ ಬಸ್ ಚಾಲಕರು ನಿರ್ವಾಹಕರು ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಿತ್ಯಕರ್ಮ ಮುಗಿಸುತ್ತಾರೆ ಎಂದು ದೂರಿದರು.
ತಹಸೀಲ್ದಾರ್ ಮಂಜುಳಾ ಸಮಸ್ಯೆ ಶೀಘ್ರಪರಿಹರಿಸುವುದಾಗಿ ಹೇಳಿದನಂತರ ಪ್ರತಿಭಟನೆ ಕೈ ಬಿಡಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಶಿವಮಲ್ಲು, ಗೌರವಾಧ್ಯಕ್ಷ ಪಿ.ಮಾದೇವ, ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಕಾರ್ಯಾಧ್ಯಕ್ಷ ಜೋಯಲ್‌ಪಿ.ನಿವಾಸ್, ಖಜಾಂಚಿ ಶಕ್ತಿವೇಲು, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಜಪಮಾಲೆ, ತಾಲೂಕು ಯುವ ಘಟಕದ ಸಂಚಾಲಕ ಮಹೇಶ್ (ವಾಸು), ಬಸವರಾಜು ಇತರರು ಇದ್ದರು.