ಕಾಯಕಯೋಗಿಯಾದ ಮಹಾಪುರುಷ

18-kglphoto-1,,,
Published on

ಕೊಳ್ಳೇಗಾಲ: ತೋಟದ ಶ್ರೀ ಸಿದ್ದಲಿಂಗೇಶ್ವರ ಪರಂಪರೆಯಲ್ಲಿ ಬಂದ ಮಹಾ ಶಿವಯೋಗಿಗಳು ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರು ಎಂದು ಮೈಸೂರು ಕುಂದೂರು ಮಠಾಧೀಶ ಡಾ.ಶ್ರೀ ಶರಶ್ಚಂದ್ರಸ್ವಾಮಿ ಹೇಳಿದರು.

ಪಟ್ಟಣದ ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿಗಳು ಹಾಗೂ ವೀರಶೈವ-ಲಿಂಗಾಯತ ನೌಕರರ ಬಸವ ಸೇವಾ ಸಮಿತಿಯು ಬಡಾವಣೆಯ ಬಸವ ಮಹಾಮನೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರಸ್ವಾಮಿ ಅವರ 117ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಸಿದ್ದಲಿಂಗೇಶ್ವರ ಪರಂಪರೆಯ ಮೂಲ ಚಾಮರಾಜನಗರದಲ್ಲಿದೆ. ಶ್ರೀ ಮಹದೇಶ್ವರರು, ಶ್ರೀ ಗುರುಮಲ್ಲೇಶ್ವರರು, ಶ್ರೀ ಶಿವರಾತ್ರೀಶ್ವರರು ಹೀಗೆ ಅನೇಕ ಶರಣರು ಈ ಭಾಗದವರೇ ಆಗಿದ್ದಾರೆ. ತೋಟದ ಶ್ರೀ ಸಿದ್ದಲಿಂಗೇಶ್ವರರ ಪರಂಪರೆಯಲ್ಲಿ ಬಂದವರು ಶ್ರೀ ಶಿವಕುಮಾರ ಸ್ವಾಮೀಜಿಗಳು ಎಂಬುದು ನಮ್ಮ ಹೆಮ್ಮೆ ಎಂದರು. ಬಸವಣ್ಣನವರ ಕಾಯಕ ಸಿದ್ಧಾಂತವನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಇಡೀ ಜಗತ್ತಿಗೆ ಡಾ.ಶಿವಕುಮಾರ ಸ್ವಾಮೀಜಿ ತೋರಿಸಿ ಕೊಟ್ಟಿದ್ದಾರೆ. ಅದಕ್ಕೆ ಅವರನ್ನು ಕಾಯಕಯೋಗಿಗಳು ಎನ್ನುತ್ತೇವೆ ಎಂದರು.

ಲಕ್ಷಾಂತರ ಮಕ್ಕಳಿಗೆ ವಸತಿ, ವಿದ್ಯೆ, ದಾಸೋಹ ನೀಡಿ ಬದುಕು ಕಟ್ಟಿಕೊಟ್ಟಿರುವ ಡಾ.ಶಿವಕುಮಾರ ಸ್ವಾಮೀಜಿ ಎಲ್ಲರಿಗೂ ಆದರ್ಶ ಮಹಾನ್ ಪುರುಷರು. ಯಾವ ಕಾಲದಲ್ಲೂ ಸಿದ್ಧಗಂಗಾ ಮಠದಲ್ಲಿ ದಾಸೋಹಕ್ಕೆ ಕೊರತೆ ಆಗಿಲ್ಲ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಉಮ್ಮತ್ತೂರು ಬಸವರಾಜು ಅವರ ತಂಡದಿಂದ ಭಜನಾ ಕಾರ್ಯಕ್ರಮ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.

ಸೋಮಹಳ್ಳಿ ವೀರಸಿಂಹಾಸನ ಶಿಲಾಮಠಾಧ್ಯಕ್ಷ ಶ್ರೀ ಸಿದ್ದಮಲ್ಲಸ್ವಾಮೀಜಿ, ಆಲಹಳ್ಳಿ ಪಟ್ಟದ ಮಠಾಧ್ಯಕ್ಷ ಶ್ರೀ ಶಿವಕುಮಾರಸ್ವಾಮೀಜಿ, ರೇಚಂಬಳ್ಳಿ ಸಿದ್ಧಮಲ್ಲೇಶ್ವರ ಪಟ್ಟದ ಮಠದ ಶ್ರೀ ಮಹಾದೇವಸ್ವಾಮೀಜಿ, ಕೊಳ್ಳೇಗಾಲದ ಭಿಕ್ಷದಮಠದ ಶ್ರೀ ಶಿವಪ್ಪಸ್ವಾಮೀಜಿ, ವೀರಶೈವ- ಲಿಂಗಾಯತ ನೌಕರರ ಬಸವ ಸೇವಾ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಪತ್ತಿನ ಸಂಘದ ಅಧ್ಯಕ್ಷ ನಂದೀಶ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಮುಖಂಡ ಬಿ.ತೋಟೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net