

ಕೊಳ್ಳೇಗಾಲ: ಇಡೀ ಜಿಲ್ಲೆಯನ್ನೆ ಬರ ಆವರಿಸಿ ಕಂಗಾಲು ಮಾಡಿತ್ತು. ಆದರೀಗ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆ ಆಗುವ ಸಂಭವವಿದ್ದು, ಅದರಂತೆ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಅಧಿಕ ಮಳೆಯಾದರೆ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ಸಂಕಷ್ಟವಾಗಬಹುದು. ಹೀಗಾಗಿ ತಾಲೂಕು ಆಡಳಿತ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.
ಮಳೆಗಾಲ ಬಂದರೆ ತಾಲೂಕಿನ ನದಿ ಪಾತ್ರ ಗ್ರಾಮಗಳಾದ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯ ಇನ್ನಿತರ ಗ್ರಾಮಗಳ ಜನರಿಗೆ ಆತಂಕ ತಪ್ಪಿದ್ದಲ್ಲ. ಏಕೆಂದರೆ ಸಾಕಷ್ಟು ಭಾರಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಆಸ್ತಿ-ಪಾಸ್ತಿ ನಷ್ಟ ಆಗಿದೆ.
ಅದರಂತೆ, ಈ ವರ್ಷದ ಮಳೆಗಾಲದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾದರೆ ಗ್ರಾಮಗಳು ಮುಳುಗಡೆಗೆ ಆಗುವ ಅತಂಕ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಿ ಪ್ರವಾಹ ತಡೆಗೆ ಸನ್ನದ್ಧವಾಗಬೇಕಿದೆ ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದದಲೂ ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳ ಜನ ಈ ಭಾರಿಯು ಪ್ರವಾಹ ಭೀತಿಯಲ್ಲಿದ್ದಾರೆ. ಅಧಿಕ ಮಳೆಯಾಗಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾದರೆ ನದಿ ಪಾತ್ರ ಗ್ರಾಮಗಳ ಜನರಿಗೆ ನಡುಕ ಉಂಟಾಗುತ್ತದೆ.
2019ರಲ್ಲಿ ಬಿದ್ದ ಭಾರಿ ಮಳೆಗೆ ಕಾವೇರಿ ಮೈದುಂಬಿ ಹರಿಯಿತು. ಪರಿಣಾಮ ನದಿ ಹಂಚಿನ ತಗ್ಗು ಪ್ರದೇಶದಲ್ಲಿರುವ ಈ ಭಾಗದ ಮುಳ್ಳೂರು, ಹಳೇ ಹಂಪಾಪುರ, ಹಳೇ ಅಣಗಳ್ಳಿ, ಹರಳೆ, ಯಡಕೂರಿಯ ಗ್ರಾಮಗಳಿಗೆ ನೀರು ನುಗ್ಗಿತ್ತು. ನೂರಾರು ಎಕರೆ ಜಮೀನು ಜಲಾವೃತಗೊಂಡಿತ್ತು. ಜಿಲ್ಲಾಡಳಿತ ನಿರ್ದೇಶನದಂತೆ ತಾಲೂಕು ಆಡಳಿತ ತೆರೆದಿದ್ದ ಕಾಳಜಿ ಕೇಂದ್ರಗಳಿಗೆ ಜನರು, ಜಾನುವಾರುಗಳನ್ನು ಸ್ಥಳಾಂತರಿಸಿ ವಸತಿ, ಆಹಾರ ವ್ಯವಸ್ಥೆ ಮಾಡಲಾಗಿತ್ತು.
ಅಂತೆಯೇ, 2020ರಲ್ಲೂ ಪ್ರವಾಹ ಭೀತಿ ಉಂಟಾಗಿತ್ತು. 2021ರಲ್ಲೂ ಪ್ರವಾಹ ಮರುಕಳುಹಿಸಿ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ನಂತರ, ಎರಡು ವರ್ಷ ಪ್ರವಾಹ ಭೀತಿ ಇದ್ದರೂ ತೊಂದರೆ ಆಗಲಿಲ್ಲ. ಆದರೀಗ ಹವಾಮಾನ ಇಲಾಖೆ ಉತ್ತಮ ಮಳೆ ಆಗುವ ಮುನ್ಸೂಚನೆ ನೀಡಿದೆ. ನಿರೀಕ್ಷೆಯಂತೆ ಮಳೆಯಾದರೆ ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿ ಕಾವೇರಿ ಮೈದುಂಬಿ ಹರಿಯಲಿದ್ದು, ಇದು ಪ್ರವಾಹ ಭೀತಿ ಹುಟ್ಟು ಹಾಕಿದೆ. ಪ್ರತಿ ಬಾರಿ ಪ್ರವಾಹ ಎದುರಾದಾಗ ಸರ್ಕಾರದ ಮಂತ್ರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಜನರಿಗೆ ಸಾಂತ್ವನ ಹೇಳುವುದು ಸಾಮಾನ್ಯವಾಗಿದೆ. ಆದರೆ, ಶಾಶ್ವತ ಪರಿಹಾರ ಮಾತ್ರ ಈ ಜನರಿಗೆ ನೀಡಲು ಯಾವ ಸರ್ಕಾರದಿಂದ ಸಾಧ್ಯವಾಗಿಲ್ಲ.
ತಡೆಗೋಡೆ ನಿರ್ಮಾಣ ಯಾವಾಗ?
ಅಧಿಕವಾಗಿ ಮಳೆಯಾದರೆ ಪ್ರವಾಹಕ್ಕೀಡಾಗುವ ಗ್ರಾಮಗಳ ರಕ್ಷಣೆ ಹಾಗೂ ಪ್ರವಾಹ ತಡೆಗೆ ಹಿಂದಿನಿಂದಲೂ ನದಿ ತಟದಲ್ಲಿ ತಡೆಗೋಡೆ ನಿರ್ಮಿಸಬೇಕು, ಇದು ಶಾಶ್ವತ ಪರಿಹಾರ ಎಂಬ ಭರವಸೆಯನ್ನು ಜನಪ್ರತಿನಿಧಿಗಳು ನೀಡುತ್ತಿದ್ದಾರೆ. ಆದರೆ, ಈ ಕೆಲಸ ನೆರವೇರಿಲ್ಲ. ಜನರಿಗೆ ಪ್ರವಾಹ ಭೀತಿಯೂ ತಪ್ಪಿಲ್ಲ.
ತಡೆಗೋಡೆ ನಿರ್ಮಿಸಲು ಶಾಸಕರಿಂದ ಮನವಿ
ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರತಿ ವರ್ಷ ಪ್ರವಾಹ ಭೀತಿ ಎದುರಿಸುವ ತಾಲೂಕಿನ ನದಿಪಾತ್ರಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಈ ವೇಳೆ ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾದರೆ ಕೆಆರ್‌ಎಸ್ ಹಾಗೂ ಕಬಿನಿ ಭರ್ತಿಯಾಗಿ ಜಲಾಶಯದಿಂದ ನದಿಗೆ ಹರಿದು ಬರುವ ನೀರಿನಿಂದ ಏಳೆಂಟು ಗ್ರಾಮಗಳು ಮುಳುಗಡೆಯಾಗುತ್ತವೆ. ಜನರ ಆಸ್ತಿ-ಪಾಸ್ತಿ ನಷ್ಟವಾಗುತ್ತದೆ. ಹಾಗಾಗಿ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಬೇಕಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರಗೌಡ, ನದಿಗೆ 8 ಕಿ.ಮೀ ತಡೆಗೋಡೆ ನಿರ್ಮಿಸಲು 150 ಕೋಟಿ ಅನುದಾನ ಬೇಕಿದೆ. ಕ್ರಿಯಾ ಯೋಜನೆ ತರಿಸಲಾಗಿದೆ. ಅನುದಾನ ಲಭ್ಯತೆ ನೋಡಿ ಕಾವೇರಿ ನೀರಾವರಿ ನಿಗಮದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದಿದ್ದರು. ಆದರೆ, ಇದೀಗ ಮಳೆಗಾಲ ಪ್ರಾರಂಭವಾಗಿದೆ. ಭರವಸೆ ಮಾತ್ರ ಹಸಿಯಾಗಿಯೇ ಉಳಿದಿದೆ.
ನದಿಪಾತ್ರ ಗ್ರಾಮಗಳಿಗೆ ಪ್ರತಿ ವರ್ಷ ಪ್ರವಾಹ ಭೀತಿ ಎದುರಾಗುತ್ತದೆ. ಶಾಶ್ವತ ಪರಿಹಾರ ಮಾತ್ರ ದೊರೆತ್ತಿಲ್ಲ. ತಾಲೂಕು ಆಡಳಿತ ಈ ಕೂಡಲೇ ಎಚ್ಚೆತ್ತುಕೊಂಡು ಮುಂಜಾಗ್ರತೆ ವಹಿಸಬೇಕಿದೆ. ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಹೂಳೆತ್ತಿ ನೀರು ತುಂಬಿಸಿದರೆ ಕನಿಷ್ಠ ಎರಡ್ಮೂರು ಟಿಎಂಸಿ ನೀರನ್ನು ಸಂಗ್ರಹಿಸಬಹುದು. ಆದರೆ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಈ ಕೆಲಸ ಮಾಡುವುದಿಲ್ಲ. ಪ್ರವಾಹ ಉಂಟಾದರೆ ಸಾಂತ್ವನ ಹೇಳಲು ಇಡಿ ಸರ್ಕಾರವೇ ಭೇಟಿ ನೀಡುತ್ತದೆ. ಇದರಿಂದ ಆಗುವ ಪ್ರಯೋಜನವೇನು?ದಶರಥ್, ರೈತ ಮುಖಂಡ, ಹಳೇ ಅಣಗಳ್ಳಿ ಗ್ರಾಮ, ಕೊಳ್ಳೇಗಾಲ ಜೂನ್ ಪ್ರಥಮ ವಾರದಲ್ಲಿ ವೈನಾಡಿಗೆ ಮನ್ಸೂನ್ ಮಳೆ ಬೀಳಲಿದ್ದು, ಈ ವೇಳೆ ಅಧಿಕ ಮಳೆಯಾದರೆ ಕಬಿನಿ ಹಾಗೂ ಕೆಆರ್‌ಎಸ್ ಭರ್ತಿಯಾಗಿ ನದಿ ತುಂಬಿ ಹರಿಯುತ್ತದೆ. ಅದಕ್ಕೂ ಮುನ್ನ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಚನೆ ನೀಡಲಾಗುತ್ತದೆ. ಹಾಗೆಯೇ ಜಲಾಶಯದಿಂದ ನದಿಗೆ ನೀರನ್ನು ಎಷ್ಟು ಪ್ರಮಾಣದಲ್ಲಿ ಬಿಡಲಾಗುತ್ತದೆ ಎಂಬ ಮಾಹಿತಿ ರವಾನೆ ಆಗುತ್ತಿರುತ್ತದೆ. ಇದರ ಅನುಗುಣವಾಗಿ ನದಿ ಪಾತ್ರದ ಗ್ರಾಮಗಳ ಜನರನ್ನು ಅಲರ್ಟ್ ಮಾಡುತ್ತೇವೆ. ಅಗತ್ಯ ಕ್ರಮ ಕೈಗೊಳ್ಳುತೇವೆ.ಎಂ.ಮಂಜುಳಾ ತಹಸಿಲ್ದಾರ್ ಕೊಳ್ಳೇಗಾಲ