

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಮಂಗಳವಾರ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಕೆಲಸ ಮಾಡುತ್ತಿದ್ದಾಗಲೇ ಕೂಲಿ ಕಾರ್ಮಿಕನೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದು, ಮೃತನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮುಳ್ಳೂರು ಗ್ರಾಮದಲ್ಲಿ ನರೇಗಾದಡಿ ಕೆರೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಚಿಕ್ಕ ವೆಂಕಟನಾಯಕ ಇದ್ದಕ್ಕಿದಂತೆ ಕೆಳಗೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವೇಳೆ ಗ್ರಾಮಸ್ಥರು ಸ್ಥಳದಲ್ಲಿಯೇ ಶವವಿಟ್ಟು ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ವಿಚಾರ ತಿಳಿದ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಟಿಎಚ್‌ಒ ಗೋಪಾಲ್ ಹಾಗೂ ಪಿಎಸ್‌ಐ ಗಣೇಶ್ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಶ್ರೀನಿವಾಸ್ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟರು.
ಪಿಡಿಒ ಮಹಜರ್ ಹಾಗೂ ವೈದ್ಯರ ವರದಿ ಆಧರಿಸಿ ಸಿಒಡಿಒ ಕಮಿಟಿಗೆ ನೀಡಲಾಗುವುದು. ಈ ಸಾವಿನ ಪ್ರಕರಣ ಬಗ್ಗೆ ಮೇಲಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಮೃತರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕ್ರಮವಹಿಸುತ್ತೇವೆ.
ಶ್ರೀನಿವಾಸ್, ಇಒ, ತಾಲೂಕು ಪಂಚಾಯಿತಿ, ಕೊಳ್ಳೇಗಾಲ.