

ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯದಲ್ಲಿ ಬುಧವಾರ ರಾತ್ರಿ ಮನೆಯ ಮುಂಭಾಗ ಕಟ್ಟಿ ಹಾಕಿದ್ದ ನಾಯಿಯೊಂದನ್ನು ಚಿರತೆ ಕೊಂದು ಹಾಕಿದೆ.
ಗ್ರಾಮದ ನಟರಾಜು ಎಂಬುವರು ಮನೆ ಎದುರು ನಾಯಿಯನ್ನು ಕಟ್ಟಿ ಹಾಕಿದ್ದರು. ಬುಧವಾರ ರಾತ್ರಿ 11 ಗಂಟೆಯಲ್ಲಿ ನಾಯಿ ಚೀರಾಡುವ ಶಬ್ದ ಕೇಳಿ ಹೊರಬಂದ ನಟರಾಜು ಹಾಗೂ ಪತ್ನಿ ಕಿಟಕಿಯಲ್ಲಿ ನೋಡಿದ್ದಾರೆ. ಈ ವೇಳೆ ಚಿರತೆ ನಾಯಿಯನ್ನು ಎಳೆದೊಯ್ಯುತ್ತಿರುವುದನ್ನು ಕಂಡು ಕೂಗಿಕೊಂಡಾಗ ಚಿರತೆ ನಾಯಿ ಬಿಟ್ಟು ಪರಾರಿಯಾಗಿದೆ. ವಿಚಾರ ತಿಳಿದ ಅರಣ್ಯಾಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾರದ ಹಿಂದೆಯಷ್ಟೆ ಹನೂರು ತಾಲೂಕಿನ ಕಾಡಂಚಿನ ಗ್ರಾಮವಾದ ಕಗ್ಗಲಗುಂದಿಯಲ್ಲಿ 6 ವರ್ಷದ ಬಾಲಕಿಯನ್ನು ಪಾಲಕರ ಎದುರೇ ಚಿರತೆ ಎಳೆದೊಯ್ದು ಗಾಯಗೊಳಿಸಿತ್ತು. ಚಿರತೆ ಚಲನವಲನ ಬಗ್ಗೆ ನಿಗಾ ವಹಿಸಿದ್ದೇವೆ. ನಮ್ಮ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆ ಸೆರೆಗಾಗಿ ಕ್ಯಾಮರಾ ಹಾಗೂ ಬೋನು ಅಳವಡಿಸಲಾಗುವುದು ಎಂದು ಸಹಾಯಕ ಉಪ ಸಂರಕ್ಷಣಾಧಿಕಾರಿ ಶಶಿಧರ್ ತಿಳಿಸಿದ್ದಾರೆ.