ಪರೀಕ್ಷಾ ಕೇಂದ್ರಗಳಿಗೆ ತಹಸೀಲ್ದಾರ್, ಡಿಡಿಪಿಐ ದಿಢೀರ್ ಭೇಟಿ

2901ae09-4c3a-4613-bc14-364cbf3b650e
Published on

ಕೊಳ್ಳೇಗಾಲ: ತಾಲೂಕಿನ ಕೆಲವು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಕೊಠಡಿಗಳ ಕಿಟಕಿ ಮೂಲಕ ಮಕ್ಕಳಿಗೆ ಉತ್ತರ ಹೇಳಿ ಕೊಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆಯಂತೆ ಗುರುವಾರ ತಹಸೀಲ್ದಾರ್ ಮಂಜುಳಾ ಹಾಗೂ ಡಿಡಿಪಿಐ ರಾಮಚಂದ್ರರಾಜೇ ಅರಸ್ ನೇತೃತ್ವದ ತನಿಖಾ ತಂಡ ಜಂಟಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮಾ.25 ರಿಂದ ಪರೀಕ್ಷೆ ಪ್ರಾರಂಭವಾಗಿದ್ದು. ಈಗಾಗಲೆ ಕನ್ನಡ, ಸಮಾಜ, ವಿಜ್ಞಾನ, ಗಣಿತ, ಹಿಂದಿ ಒಟ್ಟು 5 ಪರೀಕ್ಷೆಗಳು ಪೂರ್ಣಗೊಂಡಿವೆ. ಪರೀಕ್ಷೆ ಕೇಂದ್ರದಲ್ಲಿ ಮಕ್ಕಳಿಗೆ ಉತ್ತರ ಹೇಳಿಕೊಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಡಿಸಿ ಶಿಲ್ಪಾನಾಗ್ ಅವರು ತಹಸೀಲ್ದಾರ್ ಮಂಜುಳಾ ಹಾಗೂ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ನೇತೃತ್ವದ ತನಿಖಾ ತಂಡ ರಚಿಸಿದ್ದು. ಈ ತಂಡ ಕೊಳ್ಳೇಗಾಲ ಬ್ಲಾಕ್‌ನಲ್ಲಿರುವ ಪಟ್ಟಣದ ವಾಸವಿ ವಿದ್ಯಾಕೇಂದ್ರ, ಎಂ.ಜಿ.ಎಸ್.ವಿ. ಕಾಲೇಜು, ಸಂತ ಫ್ರಾೃನ್ಸಿಸ್ ಅಸ್ಸಿಸ್ಸಿ ಶಾಲೆ, ಎಸ್.ವಿ.ಕೆ. ಕಾಲೇಜು ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕಾಮಗೆರೆಯ ಸಂತ ಕ್ಷೇವಿಯರ್ ಶಾಲೆ, ಪ್ರಕಾಶ್ ಪಾಳ್ಯದ ಡಾನ್ ಬಾಸ್ಕೋ, ಸತ್ತೇಗಾಲದ ಸರ್ಕಾರಿ ಪ್ರೌಢಶಾಲೆ ಹಾಗೂ ಟಗರಪುರದ ಜ್ಞಾನ ಭಾರತಿ ಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಈ ತಂಡ ಭೇಟಿ ನೀಡಿತು. ಮಕ್ಕಳು ಪರೀಕ್ಷೆ ಬರೆಯುವ ಕೊಠಡಿ ಹಾಗೂ ಪರೀಕ್ಷಾ ಕೇಂದ್ರಗಳನ್ನು ವೀಕ್ಷಣೆ ಮಾಡಿ ವರದಿ ಪಡೆದಿದ್ದಾರೆ. ಕೊಠಡಿಯಲ್ಲಿರುವ ಸಿಸಿ ಕ್ಯಾಮರಾ ಹಾಗೂ ಕ್ಯಾಮರಾಗಳ ನಿರ್ವಹಣಾ ಕೊಠಡಿ ಪರಿಶೀಲಿಸಿದ್ದು, ಕೊಠಡಿಗಳ ವಿಡಿಯೋ ಚಿತ್ರಿಕರಿಸಿ, ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಪಿಎಸ್‌ಐ ಮಹೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net