

ಕೊಳ್ಳೇಗಾಲ: ಪಟ್ಟಣದ ಶ್ರೀ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಕಚೇರಿ ಮುಂಭಾಗ ಸೋಮವಾರ ಪಾಲರ್ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್‌ನವರಿಗೆ ಅನುಮತಿ ನೀಡುವಂತೆ ಅರಣ್ಯ ಸೇವಾ ಟ್ರಸ್ಟ್ ಹಾಗೂ ಪಾಲರ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಶಿವಮೂರ್ತಿ, ಸೆಸ್ಕ್ ಇಇ ತಬ್ಬಸುಂ ಬಾನು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ, ಡಿಸಿಎಫ್ ಸಂತೋಷ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಅರಣ್ಯ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ನಾಗೇಂದ್ರ ಮಾತನಾಡಿ, ಪಾಲರ್ ಗ್ರಾಮದಲ್ಲಿ 70ಕ್ಕೂ ಹೆಚ್ಚು ಮನೆಗಳಿದ್ದು, ನೂರಾರು ಕುಟುಂಬಗಳಿವೆ. ಈ ಗ್ರಾಮ ವಿದ್ಯುತ್ ಬೆಳಕನ್ನೇ ಕಂಡಿಲ್ಲ. ಶಾಲೆ, ಅಂಗನವಾಡಿ ಇದ್ದು, ಓದುವ ಮಕ್ಕಳಿಗೆ ತೊಂದರೆ ಆಗುತ್ತಿದೆ. ಚಿರತೆ, ಆನೆ ಇತರ ಕಾಡು ಪ್ರಾಣಿಗಳು ಯಾವ ಸಮಯದಲ್ಲಿ ತೊಂದರೆ ಮಾಡುವುದೋ ಎಂದು ಜೀವ ಕೈಯಲ್ಲಿ ಹಿಡಿದು ಬದುಕು ನಡೆಸುತ್ತಿದ್ದಾರೆ. ಆದರೂ ಈ ಗ್ರಾಮಕ್ಕೆ ಸರ್ಕಾರ ವಿದ್ಯುತ್ ಸಂಪರ್ಕವನ್ನು ನೀಡಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ಸೆಸ್ಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ವಿದ್ಯುತ್ ಸೌಲಭ್ಯ ಕಲ್ಪಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದರು.
ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಪಾಲರ್‌ಗೆ ವಿದ್ಯುತ್ ಸಂಪರ್ಕ ನೀಡಲು ಸೆಸ್ಕ್ ಅಧಿಕಾರಿಗಳು ನೀಡಿರುವ ಅರ್ಜಿ ಪ್ರಕ್ರಿಯೆ ಸರಿಯಾಗಿಲ್ಲ. ಹೀಗಾಗಿ ಸರಿಪಡಿಸಿ ಕಳುಹಿಸುವಂತೆ ಸೆಸ್ಕ್‌ಗೆ ಅರಣ್ಯ ಇಲಾಖೆ ವಾಪಸ್ ಕಳುಹಿಸಿದೆ. ಮತ್ತೆ ನಿಯಮಾನುಸಾರ ಅರ್ಜಿ ಸಲ್ಲಿಸಿ ಅನುಮತಿ ಸಿಕ್ಕ ಬಳಿಕ ವಿದ್ಯುತ್ ಕಲ್ಪಿಸುತ್ತಾರೆ ಎಂದರು. ಆದರೆ ಇದಕ್ಕೊಪ್ಪದ ಪ್ರತಿಭಟನಾಕಾರರು ನಮಗೆ ವಿದ್ಯುತ್ ಕೊಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳದಲ್ಲಿದ್ದ ಜಿಲ್ಲಾ ಪರಿಶಿಷ್ಟ ಕಲ್ಯಾಣ ಅಧಿಕಾರಿ ಮಂಜುಳಾ ಮಾತನಾಡಿ, ಪಾಲರ್ ಗ್ರಾಮಕ್ಕೆ ವಿದ್ಯುತ್ ಸಂಪರ್ಕಿಸಲು ಬೇಕಾದ ಅನುಮತಿಗೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳ್ಳಲು 40 ದಿನಗಳು ಕಾಲಾವಕಾಶ ಬೇಕಿದೆ. ಅಲ್ಲಿವರೆಗೂ ಪ್ರತಿಭಟನೆ ಕೈಬಿಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಇದಕ್ಕೊಪ್ಪಿದ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಹನೂರು ತಹಸೀಲ್ದಾರ್ ಗುರುಪ್ರಸಾದ್, ತಾಲೂಕು ಪರಿಶಿಷ್ಟ ಕಲ್ಯಾಣ ಅಧಿಕಾರಿ ನವೀನ್ ಮಠದ್, ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಇದ್ದರು.