ಶಾಸಕ ಜಿ.ಎನ್.ನಂಜುಂಡಸ್ವಾಮಿ ಬೆಂಬಲಿಗರ ಆಕ್ರೋಶ

26-KGLPHOTO-2, (
Published on

ಕೊಳ್ಳೇಗಾಲ: ಚಾಮರಾಜನಗರ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬೆಂಬಲಿಗರು ಅಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಡಿಸಿಎಫ್ ಕಚೇರಿಯ ರಸ್ತೆಯಲ್ಲಿರುವ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಈ ಪ್ರಸಂಗ ನಡೆಯಿತು. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರ ಸೇರಿದಂತೆ ಇತರ ಕಡೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದೀರಿ. ಹಗಲಿರುಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೀರಾ. ಈಗಿರುವಾಗ ಲೋಕಸಭಾ ಚುನಾವಣೆ ಟಿಕೆಟ್ ನಿಮಗೆ ನೀಡಬೇಕಿತ್ತು. ಆದರೆ ಸಚಿವ ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರ ಹೆಸರು ಕೇಳಿಬರುತ್ತಿದೆ ಎಂದು ಬೆಂಬಲಿಗರು ಅಕ್ರೋಶ ವ್ಯಕ್ತಪಡಿಸಿದರು.

ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಚುನಾವಣೆಗೆ ಅರ್ಜಿ ಹಾಕಬೇಡ ಎಂದು ಹೇಳಿದ್ದಾರೆ. ಇವರಿಬ್ಬರನ್ನು ಫಾಲೋ ಮಾಡುವಂತೆ ನನ್ನ ದೊಡ್ಡ ಸಾಹೇಬರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದೊಡ್ಡವರ ಮಾತಿಗೆ ಬೆಲೆ ಕೊಡಲೇ ಬೇಕು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಬೆಂಬಲಿಗರಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ಅವರ ಕೆಲಸ, ಕಾರ್ಯವನ್ನು ಮಾಡುತ್ತೇನೆ. ಸಕಾರಾತ್ಮಕವಾಗಿ ಚಿಂತನೆ ಮಾಡೋಣ. ರಾಷ್ಟ್ರ ನಾಯಕರು ನನಗೆ ಟಿಕೆಟ್ ನೀಡುವಂತೆ ಕೆಲವು ಸಚಿವರು ಸಿಎಂ ಅವರಿಗೆ ಹೇಳಿದ್ದರು. ರಾಜಕೀಯದಲ್ಲಿ ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಬೆಂಬಲಿಗರು ಧೃತಿಗೆಡಬೇಡಿ ನಾನು ಇನ್ನು ಗಟ್ಟಿಯಾಗಿದ್ದೇನೆ. ನಾನು ನಂಬಿರುವ ನಾಯಕರು ಗಟ್ಟಿಯಾಗಿದ್ದಾರೆ. ಜನರು ಎಲ್ಲವನ್ನು ನೋಡುತ್ತಿದ್ದಾರೆ. ಇನ್ನು ಟಿಕೆಟ್ ಅಂತಿಮವಾಗಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಸಮಾಧಾನಪಡಿಸಿದರು. ಮುಖಂಡರಾದ ನಗರಸಭೆ ಸದಸ್ಯ ಜಿ.ಪಿ ಶಿವಕುಮಾರ್, ಚಾಮರಾಜು, ಮನು, ನಾಗರಾಜು, ಮಹದೇವಪ್ಪ, ದೊಡೇಬಾಗಿಲು ರೇವಣ್ಣ ಸೇರಿದಂತೆ 50 ಕ್ಕೂ ಹೆಚ್ಚು ಜನರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net