ಮಕ್ಕಳು ಶರಣರ ವಿಚಾರಧಾರೆ ಅರಿಯಲಿ

8kglphoto-1..,,,.,
Published on

ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಬುಧವಾರ ಮಾಜಿ ಸಚಿವ ದಿ.ಎಚ್.ನಾಗಪ್ಪ, ಲಿಂಗೈಕ್ಯ ಭಿಕ್ಷದಾರ್ಯ ದೇವರಗುಡ್ಡಪ್ಪ, ಮಹದೇವಮ್ಮ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯವನ್ನು ಕಾಮಗೆರೆ ಭಿಕ್ಷ ಮಠಾಧ್ಯಕ್ಷ ಪ್ರಕಾಶ ಸ್ವಾಮೀಜಿ ವಹಿಸಿದ್ದರು. ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ಶರಣರ ವಿಚಾರಧಾರೆಗಳನ್ನು ಮಕ್ಕಳು ಅರಿಯಬೇಕು. ದೇವನೂರಿನ ಭಿಕ್ಷದಾರ್ಯ ಸ್ವಾಮೀಜಿ ಕಂತೆ ಭಿಕ್ಷ ಮಾಡಿ ಆಹಾರ ಪ್ರಸಾದವನ್ನು ಹಸಿದು ಬಂದವರಿಗೆ ನೀಡುತ್ತಿದ್ದರು. ಆ ಮೂಲಕ ನಿರಂತರ ದಾಸೋಹಕ್ಕೆ ಅಂದೇ ಮುನ್ನುಡಿ ಬರೆಯಲಾಗಿತ್ತು ಎಂದರು.

ಮಾಜಿ ಸಚಿವ ದಿ.ನಾಗಪ್ಪ ಅವರು ಸಾತ್ವಿಕ ರಾಜಕಾರಣಿ. ತಮ್ಮ ಜೀವಿತಾವಧಿಯಲ್ಲಿ ಜನ ಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದರು ಎಂದು ಹೇಳಿದರು. ನಿವೃತ್ತ ಶಿಕ್ಷಕ ಶಿವಣ್ಣ ಮಾತನಾಡಿ, ಶರಣರ ದಾಸೋಹ ಕಲ್ಪನೆಯನ್ನು ದೇವನೂರು ಮಠದ ಗುರುಮಲ್ಲೇಶ್ವರರು ಹಾಗೂ ಶರಣ ಭಿಕ್ಷದಾರ್ಯ ಸ್ವಾಮೀಜಿ ನಿರಂತರವಾಗಿ ಮುಂದುವರಿಸಿದ ಮಹನೀಯರು ಎಂದು ಸ್ಮರಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ತಾಲುಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿದರು. 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕಾಮಗೆರೆ ಜೆಎಸ್‌ಎಸ್ ಪ್ರೌಢಶಾಲೆಯ ಇಬ್ಬರು ವಿದ್ಯಾಥಿಗಳನ್ನು ಸನ್ಮಾನಿಸಲಾಯಿತು.
ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ರೂಪ ತೋಟೇಶ್, ಹಿರಿಯರಾದ ಎಸ್. ಮಹದೇವಸ್ವಾಮಿ, ಗೀತಾ ಮಂಜುನಾಥ್, ಅನುಪಮಾ ಗುರಪ್ಪ, ಶಾಲೆ ಮುಖ್ಯ ಶಿಕ್ಷಕ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net